ಭಾರತದೇಶ ರಾಮರಾಜ್ಯವಾಗಿ ಬೆಳಗಲಿ: ಸಿ.ಎನ್.ಮಂಜೇಗೌಡ ಆಶಯ

News 22-01-2024
Published on

ಮೈಸೂರು: ಭಾರತದ ಧಾರ್ಮಿಕ ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಉದ್ಘಾಟನೆಯಾಗುತ್ತಿರುವುದು ಸುವರ್ಣಾಕ್ಷರದಲ್ಲಿ ಬರೆಯುವ ದಿನವಾಗಿದ್ದು, ದೇಶ ರಾಮರಾಜ್ಯವಾಗಿ ಬೆಳಗಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ಶಿವರಾಂಪೇಟೆಯ ಸಭಾದ ಆವರಣದಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸಿ ಮಾತನಾಡಿದರು.

ರಾಜ್ಯದ ಎಲ್ಲ ಹಳ್ಳಿಗಳಲ್ಲಿಯೂ ಶ್ರೀರಾಮ ಮಂದಿರಗಳಿವೆ. ಎಲ್ಲರ ಮನೆಗಳಲ್ಲಿಯೂ ಶ್ರೀರಾಮನ ಫೋಟೋ ಇದೆ. ಇಡೀ ಪ್ರಪಂಚದ ಜನರು ಅಯೋಧ್ಯೆಯ ಕಡೆ ತಿರುಗಿ ನೋಡುತ್ತಿದ್ದಾರೆ. ಶ್ರೀರಾಮನನ್ನು ಕೆತ್ತಿರುವ ಶಿಲೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ದೊರೆತಿದ್ದು, ಅದನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರಿನವರಾಗಿರುವುದು ಹೆಮ್ಮೆಯ ವಿಷಯ ಎಂದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಶ್ರೀರಾಮ ಅವತಾರ ಪುರುಷನಾಗಿದ್ದು, ರಾಮನ ಆದರ್ಶ ಎಲ್ಲರಿಗೂ ಅಗತ್ಯವಾಗಿದೆ. ಶ್ರೀರಾಮ ಪರಿಪೂರ್ಣ ವ್ಯಕ್ತಿಯಾಗಿದ್ದು, ಶ್ರೀರಾಮನ ಮಾನವೀಯ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಭಾರತ ರಾಮ ರಾಜ್ಯವಾಗಬೇಕು ಎಂದರು.
ಜೆಡಿಎಸ್ ಜಿಲ್ಲಾ ಒಬಿಸಿ ಅಧ್ಯಕ್ಷ ಅಪೆಕ್ಸ್ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಬೆಟ್ಟೇಗೌಡ, ಲಕ್ಷ್ಮೀ, ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net