ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೆ ತಲುಪಲಿ

08 KRP1
ಕೆ.ಆರ್.ಪೇಟೆಯ ಕೆಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರನ್ನು ಅಭಿನಂದಿಸಲಾಯಿತು. ಎಚ್.ಟಿ.ಮಂಜು, ಬಿ.ನಾಗೇಂದ್ರಕುಮಾರ್, ಡಾ.ಎಸ್.ಯು.ಅಶೋಕ್, ಕೆ.ಸುಷ್ಮಾ, ಮಲ್ಲಿಕಾರ್ಜುನ್, ಕೆ.ಕೆ.ಪುರುಷೋತ್ತಮ್, ಶಶಿಧರ್, ಕೆ.ಸಿ.ಮಂಜುನಾಥ್, ಲಕ್ಷ್ಮೀಪುರ ಪ್ರಸನ್ನ ಇದ್ದರು.
Published on

ಕೆ.ಆರ್.ಪೇಟೆ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದುವುದರ ಜತೆಗೆ ಬಡವರ ಪರವಾದ ಚಿಂತನೆಗಳನ್ನು ಇಟ್ಟುಕೊಂಡು ಜಗತ್ತಿಗೆ ಕೀರ್ತನೆಗಳನ್ನು ಕೊಟ್ಟಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಕಾಲದಲ್ಲಿ ಜಾತಿಯ ವ್ಯವಸ್ಥೆ ಉಚ್ಚಾಯ ಸ್ಥಿತಿಯಲ್ಲಿತ್ತು. ಅಂದಿನ ಕಾಲಘಟ್ಟದಲ್ಲಿ ಶೂದ್ರರಿಗೆ ಮಠ ಮಾನ್ಯಗಳಿಗೆ ಪ್ರವೇಶವಿರಲಿಲ್ಲ. ಕನಕರು ತಮ್ಮ ಜ್ಞಾನದ ಮೂಲಕ ಉಡುಪಿಯ ಶ್ರೀಮಠವನ್ನು ಪ್ರವೇಶಿಸಿ ಜ್ಞಾನ ಸಂಪಾದನೆ ಮಾಡಿದರು. ಜಗತ್ತಿನಲ್ಲಿ ದೇವರು ಇರದ ಸ್ಥಳವೇ ಇಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಜಗಕ್ಕೆ ತೋರಿಸಿದರು ಎಂದ ಅವರು, ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ದರ್ಶನ ಕೊಟ್ಟಿದ್ದು ಈಗ ಇತಿಹಾಸ. ಕನಕರಿಗೆ ದರ್ಶನ ಕೊಟ್ಟ ಜಾಗ ಇಂದಿಗೂ ಉಡುಪಿಯಲ್ಲಿದೆ. ಇಂತಹ ಶ್ರೇಷ್ಠ ವ್ಯಕ್ತಿಯ ಕನಸುಗಳನ್ನು ಶೂದ್ರ ಸಮುದಾಯ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಕನಕದಾಸರ ತತ್ವಗಳನ್ನು ಜೀವಂತವಾಗಿಡಲು ಅರ್ಧಕ್ಕೆ ನಿಂತು ಹೋಗಿರುವ ಕನಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ರಾಜಕೀಯವನ್ನು ಬದಿಗೊತ್ತಿ ಸಮುದಾಯದ ಹಿತವನ್ನು ಕಾಯಲು ನಾನು ಹಗಲಿರುಳು ಶ್ರಮಿಸುತ್ತೇನೆ. ಇತ್ತೀಚೆಗೆ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸಮುದಾಯದ ವ್ಯಕ್ತಿಯನ್ನು ಅತ್ಯಂತ ಹೆಚ್ಚು ಮತಗಳಿಂದ ಆರಿಸಿ ಬರುವಂತೆ ನೋಡಿಕೊಳ್ಳಲಾಗಿದೆ ಎಂದ ಅವರು, ಸರ್ಕಾರದ ನಡೆ ಬಗ್ಗೆ ವೈಯಕ್ತಿಕವಾಗಿ ನನಗೆ ಬೇಸರವಿದೆ. ಆದರೂ ಜನರ ಹಿತ ಕಾಪಾಡಲು ಪ್ರಯತ್ನ ಮಾಡಲಾಗುತ್ತಿದೆ. ಕನಕದಾಸರ ಚಿಂತನೆಗಳನ್ನು ಸಾಕಾರಗೊಳಿಸಲು ಸದಾ ಸಮುದಾಯದ ಜತೆಯಲ್ಲಿ ನಿಲ್ಲುತ್ತೇನೆ ಎಂದದರು.

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಕನಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹುಣಸೂರಿನ ಕೊತ್ತತ್ತಿ ಗ್ರಾಮದ ಪ್ರೌಢಶಾಲಾ ಶಿಕ್ಷಕ ಮಹದೇವ್ ಕಲ್ಕುಣಿ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಎಂ.ಹೊಸೂರು ಗ್ರಾಮಸ್ಥರು ವೀರ ಮಕ್ಕಳ ಕುಣಿತ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲೂಕು ಪಂಚಾಯಿತಿ ಇಒ ಕೆ.ಸುಷ್ಮಾ, ಆರ್‌ಟಿಒ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಕೆ.ಪುರುಷೋತ್ತಮ್, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್, ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಲಕ್ಷ್ಮೀಪುರ ಪ್ರಸನ್ನ, ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಡಿ.ಪ್ರೇಮಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದಿಲೀಪ್, ತಾಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಕೆ.ಎಸ್.ಚಂದ್ರು ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net