ಸನಾತನ ಧರ್ಮಕ್ಕೆ ದೈವಾನುಕೂಲ ಒದಗಲಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಯ

23gkn2- anavarana
Published on

ಗೋಕರ್ಣ: ಆಧುನಿಕ ಭಾರತದ ಜಾತಕದ ಪ್ರಕಾರ ಧರ್ಮ ಪ್ರತೀಕವಾದ ಗುರುಗ್ರಹ ಪ್ರತಿಕೂಲ ಅಥವಾ ಶತ್ರು ಸ್ಥಾನದಲ್ಲಿದ್ದಾನೆ. ಹೀಗಾಗಿ ಇವತ್ತಿನ ಭಾರತದಲ್ಲಿ ಸನಾತನ ಧರ್ಮ ಗೌರವ ಸ್ಥಾನದಿಂದ ವಿಮುಖವಾಗಿದೆ. ದೇಶಕ್ಕೆ ಶುಭದಿನಗಳು ಮತ್ತೆ ಉದಯವಾಗಿ ದೈವಾನುಕೂಲ ಒದಗಿ ಬರುವಂತಾಗಲು ದೇಶಕ್ಕೆ ಪುನರ್ಜನ್ಮದ ಅಗತ್ಯ ಬಹಳವಾಗಿದೆ ಎಂದು ಚಾತುರ್ವಸ್ಯ ವ್ರತಧಾರಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿ ಭವನದಲ್ಲಿ ಶುಕ್ರವಾರ ನಡೆದ ‘ಕಾಲ’ ಕುರಿತ ಸರಣಿ ಪ್ರವಚನದಲ್ಲಿ ಶ್ರೀಗಳು ಆಶೀರ್ವದಿಸಿದರು.


ಜ್ಯೋತಿಷ್ಯದ ಮೂಲಕ ವ್ಯಕ್ತಿಗಳ ಜಾತಕ ವಿದ್ಯಮಾನವನ್ನು ಮಾತ್ರವಲ್ಲ, ದೇಶ ಮತ್ತು ವಿಶ್ವದ ಗ್ರಹ-ರಾಶಿ ಫಲ ಮತ್ತು ಜಾತಕವನ್ನೂ ಕೂಡ ಅರಿಯಬಹುದಾಗಿದೆ. ಸಮಸ್ತ ದೇಶ ಮತ್ತು ಜಗತ್ತಿನ ಆಗು-ಹೋಗುಗಳು ಮತ್ತು ಭವಿಷ್ಯದ ವಿವರವನ್ನು ಜ್ಯೋತಿಷ ಶಾಸ್ತ್ರದಿಂದ ಪಡೆಯಬಹುದಾಗಿದೆ. 1947ರಲ್ಲಿ ದೇಶದ ಆವಿರ್ಭಾವವಾದಾಗ ದೇಶ ಹೊಂದಿದ್ದ ಗ್ರಹ-ರಾಶಿ ಸ್ಥಾನಗಳ ಅಧ್ಯಯನದ ಪ್ರಕಾರ ಯಾವೊಂದು ಶುಭಗ್ರಹಗಳೂ ಅನುಕೂಲಕರವಾಗಿರಲಿಲ್ಲ. ದೇಶದ ಜಾತಕದಲ್ಲಿನ ಅರ್ಧ ಸ್ವರೂಪದ ಪ್ರತೀಕವಾದ ರಾಹುವಿನ ಅಂದಿನ ಸ್ಥಿತಿಸ್ಥಾನದಿಂದ ದೇಶ ಅರ್ಧವಾಗಿ ವಿಭಜನೆಗೊಳಗಾಯಿತು. ಪಾಪ ಗ್ರಹಗಳು ಮಾತ್ರ ಅನುಕೂಲ ಸ್ಥಾನದಲ್ಲಿರುವುದರಿಂದ ದೇಶ ದುರವಸ್ಥೆಗೆ ಸಿಲುಕಿತು.


ಕಳೆದ ದಶಕದಿಂದ ದೇಶ ಪ್ರಬಲ ಸ್ಥಾನದಲ್ಲಿರಲು ಬುಧ ಅನುಕೂಲಕರವಾಗಿರುವುದು ಮುಖ್ಯ ಹಿನ್ನೆಲೆ. ಇದೇ ರೀತಿ ಇತ್ತೀಚಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸ್ವಂತ ಬಲ ಬಾರದೇ ಇರಲು ಗುರುಗ್ರಹದ ಬಾಲ್ಯಾವಸ್ಥೆ ಮತ್ತು ಶುಭಗ್ರಹಗಳು ದುರ್ಬಲವಾಗಿ ಪಾಪಗ್ರಹಗಳು ಅಧಿಕ ಶಕ್ತಿಯುತವಾಗಿರುವುದು ಪ್ರಧಾನ ಹಿನ್ನೆಲೆ. ದೇಶಕ್ಕೆ ಶುಭದಿನಗಳು ಬರುವಂತಾಗಲು ದೇಶಕ್ಕೆ ಹೊಸ ಜಾತಕ ಫಲಗಳಿಂದ ಪುನರ್ಜನ್ಮವಾಗುವ ಅಗತ್ಯವಿದೆ. ಇದರ ಮೂಲಕ ಪುನಃ ಭಾರತೀಯ ಸನಾತನ ಧರ್ಮಕ್ಕೆ ಗೌರವ ಸ್ಥಾನ ಒದಗಿಬಂದು ದೈವಾನುಗ್ರಹ ಪ್ರಾಪ್ತವಾಗುವ ಅವಕಾಶಗಳಿವೆ ಎಂದು ಶ್ರೀಗಳು ದೇಶದ ಜಾತಕ ಮತ್ತು ಭವಿಷ್ಯವನ್ನು ವಿಶ್ಲೇಷಿಸಿದರು.


ಕಾರ್ಯಕ್ರಮದಲ್ಲಿ ತಿಗಳಾರಿ ಲಿಪಿ ಸಂಶೋಧಕಿ ಅರ್ಪಿತಾ ಹೆದ್ಲಿ, ಹವ್ಯಕರ ನಿಗೂಢ ಲಿಪಿ ತಿಗಳಾರಿಯ ಮಹತಿಯನ್ನು ಅನಾವರಣ ಮಾಡಿದರು. ಮಡಿವಾಳ, ಭೋವಿ ಮತ್ತು ನಾಡವ ಸಮಾಜದಿಂದ ಸ್ವರ್ಣ ಪಾದುಕಾ ಪೂಜೆ ಸಮರ್ಪಿತವಾಯಿತು.
ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಳ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಸಂಯೋಜಕ ಹಾರಕೆರೆ ನಾರಾಯಣ ಭಟ್ಟ, ಚಾತುರ್ವಸ್ಯ ಸಮಿತಿಯ ಶ್ರೀಕಾಂತ ಪಂಡಿತ, ನಾಡವ ಸಮಾಜದ ಪ್ರಮುಖರಾದ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಟಿ. ಪ್ರಮೋದ ರಾವ್, ಶಿವಶಕ್ತಿ ಬ್ಯಾಂಕ್ ಅಧ್ಯಕ್ಷ ಪ್ರದೀಪ ನಾಯಕ, ಉದ್ಯಮಿ ಆನಂದ ಕವರಿ, ನಿವೃತ್ತ ಶಿಕ್ಷಕ ಬೀರಣ್ಣ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net