

ವಿರಾಜಪೇಟೆ: ಗಣೇಶೋತ್ಸವ ಒಂದು ದೇವರ ಕಾರ್ಯಕ್ರಮವಾಗಿದ್ದು, ಉತ್ಸವ ಯಶಸ್ವಿಯಾಗಿ ನಡೆಯಲು ಉತ್ತಮ ಸಂಘಟನೆ ಅಗತ್ಯವಾಗಿದೆ. ಕಾನೂನನ್ನು ಚೌಕಟ್ಟನ್ನು ಮೀರದೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸಲಹೆ ನೀಡಿದರು.
ವಿರಾಜಪೇಟೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಗಣೇಶೋತ್ಸವ ಆಯೋಜಕರ ಸಭೆಯಲ್ಲಿ ಮಾತನಾಡಿ, ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿ ಅರಿತು ಪರಿಸರ ಸಂರಕ್ಷಣೆ ಪೂರಕವಾಗುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು. ಸಿಡಿಮದ್ದು ಪ್ರದರ್ಶನ ಹಾಗೂ ಡಿಜೆಗೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ನಿರ್ದಿಷ್ಟ ಶಬ್ದ ಮಿತಿ ಮೀರದಂತೆ ಸಂಘಟಕರು ಎಚ್ಚರ ವಹಿಸಬೇಕು ಪಿಒಪಿ ಮೂರ್ತಿಗಳನ್ನು ಬಳಸಲು ಅವಕಾಶವಿಲ್ಲ. ಶೋಭಾಯಾತ್ರೆಯಂದು ಮದ್ಯಪಾನ ಮಾಡಿ ಗಲಭೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ 15 ರಿಂದ 20 ತಂಡ ರಚಿಸಲಾಗುತ್ತದೆ ಎಂದರು.
ಶೋಭಾಯಾತ್ರೆಯ ಸಂದರ್ಭ ಯಾವುದೇ ವ್ಯಕ್ತಿ ಅಥವಾ ಯಂತ್ರದ ಮೂಲಕ ಬೆಂಕಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ರೀತಿ ಅಪಾಯಕಾರಿ ಸಾಹಸ ಯಾರಾದರೂ ಮಾಡಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೋಭಾಯಾತ್ರೆಯ ಮಂಟಪವು ವಾಹನದ ಅಳತೆಗೆ ಸಮರ್ಪಕವಾಗಿರಲಿ, ಆಡಂಬರದ ಹಿನ್ನೆಲೆಯಲ್ಲಿ ದೊಡ್ಡ ಮಂಟಪಗಳನ್ನು ಮಾಡಿ ಆಯತಪ್ಪಿ ಬಿದ್ದು ಅಪಘಾತವಾಗದಂತೆ ಎಚ್ಚರ ವಹಿಸಬೇಕು ಎಂದು ಆಯೋಜಿಕರಿಗೆ ಸಲಹೆ ನೀಡಿದರು.
ಗಣೇಶ ಮೂರ್ತಿ ವಿಸರ್ಜನೆ ಸ್ಥಳಗಳಲ್ಲಿ ವಿಶೇಷವಾದಂತಹ ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಿಸಬೇಕು. ನಿಯಮವನ್ನು ಮೀರಿದ್ದಲ್ಲಿ ಉತ್ಸವ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿರಾಜಪೇಟೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಮಾತನಾಡಿ, ಸಿಂಗಲ್ ವಿಂಡೋ ಸಿಸ್ಟಮ್ ಆರಂಭಿಸಲಾಗಿದ್ದು, ಉತ್ಸವ ಸಮಿತಿಗಳು ಸೆಸ್ಕ್, ಅಗ್ನಿಶಾಮಕ ದಳ, ಪೊಲೀಸ್ ಠಾಣೆ , ಆರ್‌ಟಿಒ, ತಹಸೀಲ್ದಾರ್ ಕಚೇರಿ, ಅರಣ್ಯ ಇಲಾಖೆ ಮುಂತಾದ ಕಡೆಯಲ್ಲಿ ಸೂಕ್ತ ದಾಖಲೆ ನೀಡಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಉತ್ಸವ ನಡೆಸುವಂತೆ ಹೇಳಿದರು.
ಶೋಭಾಯಾತ್ರೆ ದಿನ 7 ಗಂಟೆಗಳ ತನಕ ನಗರದ ಮುಖ್ಯರಸ್ತೆಗಳಲ್ಲಿ ಆಟೋ ಚಾಲನೆಗೆ ಅನುವು ಮಾಡಿಕೊಡುವಂತೆ ಆಟೋಚಾಲಕ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದರು. ವಿರಾಜಪೇಟೆ ನಗರದ ಗಣೇಶೋತ್ಸವ ಸಮಿತಿಯವರು ಶೋಭಾಯಾತ್ರೆಗೂ ಮುನ್ನ ನಗರದ ಮುಖ್ಯರಸ್ತೆಯಲ್ಲಿರುವ ಹಳ್ಳಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ವಿರಾಜಪೇಟೆ ತಹಸೀಲ್ದಾರ್ ಅನಂತಶಂಕರ್, ಪುರಸಭೆಯ ಅಧ್ಯಕ್ಷೆ ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಬುಸುಮ್, ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್, ಮೇದಪ್ಪ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ 40ಕ್ಕೂ ಅಧಿಕ ಉತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು ಇದ್ದರು.