

ಚಿಕ್ಕೋಡಿ: ವಿದ್ಯಾರ್ಥಿಗಳು ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಸೌಲಭ್ಯ ಬಳಸಿಕೊಂಡು ಕಾನೂನು ಪದವಿ ಪಡೆದ ನಂತರ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಚಿಕ್ಕೋಡಿ ೭ನೇ ಹೆಚ್ಚುವರಿ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಹೇಳಿದರು.
ತಾಲೂಕಿನ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾಲೇಜು ಒಕ್ಕೂಟ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನೀವು ವಕೀಲರಾದ ನಂತರ ವೃತ್ತಿ ಜೀವನದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹರೀಶ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನ್ಯಾಯಮೂರ್ತಿ ನಾಗರತ್ನ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಸಗರೆ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಸ್.ಬಿ.ಚೊನ್ನದ, ವರ್ಷಾ ನವರಕ್ಕಿ, ಪಿ.ಎಂ.ಕಮತೆ, ವಿ.ಎಸ್.ಬಿಳಗಿ ಇತರರಿದ್ದರು. ಪ್ರಾಚಾರ್ಯ ಡಿ.ಬಿ.ಸೋಲಾಪುರೆ ಸ್ವಾಗತಿಸಿದರು. ಋತುಜಾ ಮಾಳಿ ಮತ್ತು ಸುಶಾಂತ ಹಿಪ್ಪರಗಿ ನಿರೂಪಿಸಿದರು. ಪ್ರತಿಷ್ಠಾ ಶೆಟ್ಟಿ ವಂದಿಸಿದರು.