ಉಚಿತ ಪ್ರಯಾಣ ನಿರಂತರವಾಗಿರಲಿ: ಮಹಿಳೆಯರ ಮನವಿ

sundaresh
ಶಕ್ತಿ ಯೋಜನೆಯ ಬಗ್ಗೆ ಎಚ್.ಎಸ್.ಸುಂದರೇಶ್ ಮಹಿಳಾ ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿದರು. ಸೌಗಂಧಿಕಾ, ವಿಜಯಲಕ್ಷ್ಮೀ ಪಾಟೀಲ್ ಇತರರಿದ್ದರು.
Published on

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಂಗಳವಾರ ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿದರು. ಮಹಿಳಾ ಪ್ರಯಾಣಿಕರ ಅಭಿಪ್ರಾಯ ಪಡೆದು, ಪುರುಷರ ಸಮಸ್ಯೆಗಳಿಗೂ ಕಿವಿಯಾದರು.

ಸರ್ಕಾರದ ಈ ಯೋಜನೆಯಿಂದ ತುಂಬ ಅನುಕೂಲವಾಗಿದೆ. ಈ ಯೋಜನೆಯನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದು. ಲೋಕಸಭಾ ಚುನಾವಣೆ ಬಳಿಕ ಇದನ್ನು ಸ್ಥಗಿತಗೊಳಿಸಬೇಡಿ ಎಂದು ಅನೇಕ ಮಹಿಳೆಯರು ಸುಂದರೇಶ್ ಅವರಿಗೆ ಮನವಿ ಮಾಡಿದರು.
ಶಕ್ತಿ ಯೋಜನೆಯಿಂದ ಉಂಟಾಗಿರುವ ಕೆಲವು ಸಮಸ್ಯೆಗಳನ್ನು ಪುರುಷ ಪ್ರಯಾಣಿಕರು ವಿವರಿಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಕೆಲವು ಮಾರ್ಗಗಳಲ್ಲಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿರುತ್ತದೆ. ಶಾಲಾ, ಕಾಲೇಜಿಗೆ ತೆರಳುವ ಹಾಗೂ ಅಲ್ಲಿಂದ ಮರಳುವ ಸಂದರ್ಭ ವಿದ್ಯಾರ್ಥಿಗಳು ಪ್ರಯಾಣಿಸುವುದೇ ಕಷ್ಟವಾಗಿದೆ. ಇಂತಹ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಎಚ್.ಎಸ್.ಸುಂದರೇಶ್ ಮಾತನಾಡಿ, ರಾಜ್ಯ ಸರ್ಕಾರ ನಾಲ್ಕು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಕಾಂಗ್ರೆಸ್ ಯಾವಾಗಲೂ ಬಡವರ ಪರವಾಗಿರುತ್ತದೆ ಎಂದು ಹೇಳಿದರು.
ನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಮೆಹಕ್ ಶರ್ೀ, ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಸೌಗಂಧಿಕಾ, ಪ್ರಮುಖರಾದ ಎನ್.ಡಿ.ಪ್ರವೀಣ್‌ಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net