ರೈತರ ಫಸಲಿಗೆ ನ್ಯಾಯಯುತ ಬೆಲೆ ಸಿಗುವಂತಾಗಲಿ

3 mlv 1
ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರಾದ ಎಂ.ಎನ್.ಮಹೇಶ್ ಕುಮಾರ್, ಗಜೇಂದ್ರ ರವರನ್ನು ಅಭಿನಂದಿಸಲಾಯಿತು. ಬಸವರಾಜು, ಆರ್.ಜಿ. ಮಹದೇವಸ್ವಾಮಿ, ಕೆಂಪರಾಜು, ಶ್ರೀಕಂಠಸ್ವಾಮಿ, ರಶ್ಮಿ, ಶೋಭಾ ಇದ್ದರು.
Published on

ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಅಭಿಮತ

ಮಳವಳ್ಳಿ : ರೈತನ ಶ್ರಮದಿಂದಲೇ ಇಡೀ ಮನುಕುಲ ಜೀವಿತವಾಗಿರುವುದರಿಂದ ಆತನ ಬೆವರಿನ ಪ್ರತಿ ಕಣವನ್ನೂ ಭೂಮಾತೆಯಲ್ಲಿ ಬಸಿದು ಬೆಳೆಯುವ ಫಸಲಿಗೆ ನ್ಯಾಯವಾದ ಬೆಲೆ ಸಿಗುವಂತಾಗಬೇಕು, ಆಗ ಮಾತ್ರ ಅನ್ನದಾತರಿಗೆ ಗೌರವ ದೊರೆತಂತಾಗುತ್ತದೆ ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.

ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜಗದೀಶ್ ಚಂದ್ರಬೋಸ್ ವಿಜ್ಞಾನ ಮತ್ತು ಎನ್. ರಾಮಾನುಜನ್ ಗಣಿತ ಸಂಘ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನ ಮತ್ತು ಗ್ರಾಹಕ ದಿನ ಹಾಗೂ ಗಣಿತ ತಜ್ಞ ಎಸ್.ರಾಮಾನುಜನ್ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ಕೃಷಿಯಲ್ಲಿ ರೈತರು ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ ಅವುಗಳನ್ನು ತಳಮಟ್ಟದ ಕೃಷಿಕರಿಗೆ ತಲುಪಿಸುವ ಕೆಲಸವಾಗದೆ ಉಳ್ಳವರೇ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಸಭೆ-ಸಮಾರಂಭಗಳಲ್ಲಿ ರೈತ ಈ ದೇಶದ ಬೆನ್ನೆಲುಬು ಎಂದು ಉದ್ದುದ್ದ ಭಾಷಣ ಮಾಡಿದರೆ ಸಾಲದು, ಆತ ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯಾಧಾರಿತ ಬೆಲೆ ಸಿಗುವಂತೆ ಮಾರುಕಟ್ಟೆ ರೂಪಿಸುವ ಮೂಲಕ ಬೆನ್ನು ತಟ್ಟಿ ಆಸರೆಯಾಗಬೇಕು. ಆಡಳಿತ ನಡೆಸುವ ಅಧಿಕಾರಿಗಳು ಇಂತಹ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಹಳ್ಳಿಗಾಡಿನ ಬಹಳಷ್ಟು ರೈತವರ್ಗಕ್ಕೆ ಅರಿವೇ ಇರುವುದಿಲ್ಲ. ಜಾಗೃತಿ ಮೂಡಿಸಿ ಸಫಲತೆ ಪಡೆದುಕೊಳ್ಳಲು ಸಹಕಾರಿಯಾಗಬೇಕಿರುವ ಅಧಿಕಾರಿಗಳು ಇಚ್ಛಾಶಕ್ತಿ ಮೂಡಿಸಿಕೊಂಡು ಅನ್ನದಾತರಿಗೆ ಪ್ರೋತ್ಸಾಹಿಸಿ ಅವರಲ್ಲಿ ಆತ್ಮಗೌರವ ಹೆಚ್ಚುವಂತೆ ಮಾಡಬೇಕು. ಆಗ ಮಾತ್ರ ರೈತ ದಿನಕ್ಕೆ ಮೌಲ್ಯ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳೆಗಳ ಇಳುವರಿ ಆಸೆಗೆ ರಾಸಾಯನಿಕ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡು ವಿಷಯುಕ್ತವಾಗಿದೆ. ಆದ್ದರಿಂದ ನಮ್ಮ ಇಂದಿನ ರೈತರು ರಾಸಾಯನಿಕ ಮುಕ್ತ ಹಾಗೂ ಸಮಗ್ರ ಬೇಸಾಯದೆಡೆಗೆ ಮನ ಪರಿವರ್ತನೆ ಮಾಡಿಕೊಳ್ಳಬೇಕಿದ್ದು, ಆಗ ಮಾತ್ರ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.

ಕುಂದೂರು ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಎನ್. ಮಹದೇವಪ್ರಸಾದ್ ಅವರು ಎಸ್.ರಾಮಾನುಜನ್ ಜನ್ಮದಿನದ ಕುರಿತು ಹಾಗೂ ವಕೀಲ ಶ್ರೀಕಂಠಸ್ವಾಮಿ ಗ್ರಾಹಕರ ದಿನದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಗಜೇಂದ್ರ, ಮುಖ್ಯಶಿಕ್ಷಕ ಬಸವರಾಜು, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಆರ್.ಜಿ.ಮಹದೇವಸ್ವಾಮಿ, ಸಹಶಿಕ್ಷಕರಾದ ಕೆಂಪರಾಜು, ರಶ್ಮಿ, ಶೋಭಾ, ಚಿನ್ಮಯಿ, ಐಶ್ವರ್ಯಾ, ಸುಮಿತ್ರಾ, ದಿವ್ಯಾ, ಕಾವ್ಯಾ, ಸಿಂಧು, ಭೂಮಿಕಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net