ಪ್ರತಿಯೊಬ್ಬರೂ ಸಾಮರಸ್ಯದ ಜೀವನ ನಡೆಸಿ

18M.D.R.10
ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರರಿಯುವ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಸಿ.ನಂಜೇಗೌಡ ಉದ್ಘಾಟಿಸಿದರು. ಎಸ್.ಸಿ.ನಳಿನಿ, ಅಪೂರ್ವಚಂದ್ರ, ಎಂ.ಎನ್.ಶಿವಣ್ಣ, ಎಂ.ಜೆ.ಸುಮಂತ್, ಅನಂತರಾಮು, ಯು.ಎಸ್.ಶಿವಕುಮಾರ್ ಇದ್ದರು.
Published on

ಮದ್ದೂರು: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ಕಾನೂನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರೂ ಸಾಮರಸ್ಯದ ಜೀವನ ನಡೆಸಬೇಕು ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಸಿ.ನಂಜೇಗೌಡ ಹೇಳಿದರು.

ತಾಲೂಕಿನ ಬೆಳತೂರು ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಭಾರತದ ಸವಿಧಾನದ ಪ್ರಕಾರ ಪ್ರಜಾಪ್ರಭುತ್ವದ ಸುಗಮ ಕಾರ್ಯ ನಿರ್ವಹಣೆಗೆ ಮೂಲಭೂತ ಹಕ್ಕುಗಳು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಸಮಾಜದ ಕಟ್ಟ ಕಡೆಯ ಹಾಗೂ ದರ್ಬಲರಿಗೂ ನ್ಯಾಯ ಸಿಗಬೇಕೆಂಬ ಕಾರಣದಿಂದ ಕಾನೂನು ಸೇವಾ ಸಮಿತಿಯನ್ನ ರಚಿಸಿದ್ದು ಅದರ ಮೂಲಕ ಉಚಿತವಾಗಿ ಕಾನೂನಿನ ಸಹಾಯ ಪಡೆಯಬಹುದು ಎಂದ ಅವರು ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನ ಬಗೆಹರಿಸಿಕೊಂಡು ಸಂತೃಪ್ತಿಯ ಜೀವನ ನಡೆಸುವುದಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಿರಿಯ ನ್ಯಾಯಾಧೀಶರಾದ ಎಸ್.ಸಿ.ನಳಿನಿ ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದ ಅವರು ಹೆಣ್ಣು ಮಕ್ಕಳು ಸಂವಿಧಾನ ಬದ್ದವಾಗಿ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣವನ್ನ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕಿವಿಮಾತು ಹೇಳಿದರು.

ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಸಿ.ಅಪೂರ್ವಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲದ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್, ಗ್ರಾಂಪಂ ಸದಸ್ಯರಾದ ಡಿ.ನಳಿನಾಕುಮಾರಿ, ಅನಂತರಾಮು, ಮುಖಂಡರಾದ ಬಿ.ಎನ್.ಕೃಷ್ಣ, ಸಿದ್ದರಾಮು, ಎಂ.ಶಿವರಾಜು ಪ್ರಾಂಶುಪಾಲ ಯು.ಎಸ್.ಶಿವಕುಮಾರ್ ಶಿಬಿರಾಧಿಕಾರಿಗಳಾದ ಎಚ್.ಎಸ್.ಪಂಚಲಿಂಗೇಗೌಡ ಹಾಗೂ ಸಹ ಶಿಬಿರಾಧಿಗಳಾದ ಎನ್.ರೇವಣ್ಣ, ಜಯವರ್ಧನ್, ಸುರೇಂದ್ರ, ಬಿ.ಸಿ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net