

ತಿ.ನರಸೀಪುರ: ಪ್ರತಿಯೊಬ್ಬರೂ ಪ್ರತಿಕ್ಷಣವನ್ನು ಸಂತೋಷದಿಂದ ಆನಂದಿಸುವುದರ ಮೂಲಕ ಇಷ್ಟಪಟ್ಟು ಬದುಕುವುದನ್ನು ಕಲಿಯಿರಿ ಎಂದು ನಿವೃತ್ತ ಉಪನ್ಯಾಸಕ ಜ್ಞಾನೇಶ್ ಸಲಹೆ ನೀಡಿದರು.
ಹಳೇ ವಿದ್ಯಾರ್ಥಿಗಳ ಸವಿನೆನಪಿನ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿ, ಮನುಷ್ಯನಿಗೆ ಇರುವುದು ಒಂದೇ ಬದುಕು. ಹೀಗಾಗಿ ನಾನು ಉತ್ತಮ, ಅತ್ಯುತ್ತಮ ಎಂದು ಸಂಭ್ರಮದಿಂದ ಜೀವನ ನಡೆಸಿ ಎಂದು ಹೇಳಿದರು.
ಪ್ರಸ್ತುತ ಸನ್ನಿವೇಶದಲ್ಲಿ ಅಶಾಂತಿ, ಅತೃಪ್ತಿ, ಆತಂಕದ ನಡುವೆ ಜೀವಿಸುತ್ತಿದ್ದೇವೆ. ಜತೆಗೆ ಬೆಳೆಯುತ್ತಿದ್ದೇವೆ. ಹಳೆಯ ಹಾಗೂ ಕಳೆದು ಹೋದ ಪ್ರಸಂಗಗಳ ಬಗ್ಗೆ ಚಿಂತೆ ಮಾಡಬೇಡಿ. ಅದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಕಳೆದ ಹತ್ತು ವರ್ಷಗಳಲ್ಲೇ ಭಾರಿ ಪ್ರಮಾಣದ ಬದಲಾವಣೆ ಆಗಿದೆ. ಹಾಗಾಗಿ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕು ಎಂದು ಭವಿಷ್ಯದ ಬಗ್ಗೆ ಚಿಂತಿಸುವುದು ಸರಿಯಲ್ಲ. ಆ ಮುಂದಿನ ಹತ್ತು ವರ್ಷದಲ್ಲಿ ಬೇರೆನೇ ಬದಲಾವಣೆ ಆಗಿರುತ್ತದೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು.
ಕೊರಗು, ಆತಂಕವೇ ಜೀವನ ಅಲ್ಲ. ಪರಿಸರದಲ್ಲಿ ವಿಸ್ಮಯ, ವಿಚಿತ್ರ ಇದೆ. ನಮ್ಮ ನಡುವೆ ಇರುವ ಗಾಳಿ, ಬೆಳಕು ವಿಸ್ಮಯ. ಹೀಗಾಗಿ ಸಕರಾತ್ಮಕವಾಗಿ ಜೀವನ ನಡೆಸುವ ಮೂಲಕ ಸಂಭ್ರಮಿಸಬೇಕು. ಸಂತೋಷ, ಖುಷಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದು ಜೀವನದ ಪಾಠ ಮಾಡಿದರು.