

ಮುಂಡಗೋಡ: ಜಗತ್ತಿಗೆ ಶಾಂತಿ ಸಂದೇಶ ನೀಡುವ ಶಕ್ತಿ ಭಾರತಕ್ಕೆ ಮಾತ್ರ ಇದೆ. ಹಾಗಾಗಿ ಭಾರತ ಉಳಿಯಬೇಕು. ಭಾರತವನ್ನು ಯಾರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ನಿಜಗುಣಾನಂದ ಸ್ವಾಮಿಗಳು ಹೇಳಿದರು.
ಇಲ್ಲಿಯ ನಗರಸಭೆ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಗೌತಮ ಬುದ್ಧ, ಬಸವಣ್ಣನವರ ಶಾಂತಿ ಮತ್ತು ಸಮಾನತೆಯ ವೈಚಾರಿಕ ಹಬ್ಬದ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬುದ್ಧ ಜನಿಸಿದ ದೇಶವಿದು. ಬುದ್ಧನ ಮುಂದೆ ಎಲ್ಲರೂ ಚಿಕ್ಕವರು. ಬುದ್ಧನಲ್ಲಿದ್ದಂತಹ ಶಾಂತಿ ಭಾವ ಪ್ರತಿಯೊಬ್ಬರಲ್ಲೂ ಬಂದು ಬಿಟ್ಟರೆ ಜಗತ್ತಿನಲ್ಲಿ ಯಾವುದೇ ಭೇದ-ಭಾವ ಎಂಬುದು ಉಳಿಯಲು ಸಾಧ್ಯವಿಲ್ಲ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಕೈಕ ವ್ಯಕ್ತಿ ಬುದ್ಧ ಮಾತ್ರ. ಈ ದೇಶದಲ್ಲಿ ಶಾಂತಿಯಿಂದ ಬದುಕಬೇಕಾದರೆ ಮಹಾತ್ಮರ ಶಾಂತಿ ಮಂತ್ರವನ್ನು ಅಳವಡಿಸಿಕೊಳ್ಳಲೇಬೇಕು. ಎಲ್ಲರ ಮನೆಗಳಲ್ಲಿ ಬುದ್ಧನ ಮೂರ್ತಿಗಳನ್ನು ಇಡುತ್ತಾರೆ. ಏಕೆಂದರೆ ಬುದ್ಧ ಜಾತಿ ಧರ್ಮ ಮತ ಇವೆಲ್ಲವನ್ನೂ ಮೀರಿದವರಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಾರೆ. ಆದರೆ, ಜಗತ್ತಿನ ಎಲ್ಲರ ಬದುಕಿಗೆ ಬೆಳಕು ಮತ್ತು ಶಾಂತಿಯನ್ನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ನೀಡಿದವರು ಮಾತ್ರ. ಪ್ರತಿಯೊಬ್ಬರಿಗೂ ಕೂಡ ಶಾಂತಿ ಸುವ್ಯವಸ್ಥಿತವಾಗಿ ಭಾವೈಕ್ಯದಿಂದ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುವ ಏಕೈಕ ದೇಶವೆಂದರೆ ಅದು ಭಾರತ. ಹೊರಗಡೆಯಿಂದ ಬಂದರನ್ನು ಮನೆಮಗನಂತೆ ನೋಡಿಕೊಳ್ಳುವ ಗುಣ ಧರ್ಮ ನಮ್ಮ ದೇಶದ್ದು, ಇದು ಜಗತ್ತಿಗೆ ಗೊತ್ತಿದೆ. ಇಂದು ದೇಶದಲ್ಲಿ ಪ್ರತಿಯೊಬ್ಬರೂ ಸ್ವತಂತ್ರವಾಗಿ ಮಾತನಾಡಲು ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಬಸವಣ್ಣನವರ ಪಾತ್ರ ಪ್ರಮುಖವಾಗಿದೆ ಎಂದು ನಿಜಗುಣಾನಂದ ಸ್ವಾಮಿಗಳು ಬಣ್ಣಿಸಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದಿದ್ದು, ಸಾಕಷ್ಟು ಮುಂದುವರಿದರೂ ಸಹ ಇಂದಿಗೂ ನಾವು ಜಾತಿಯತೆ ಬಗ್ಗೆ ಮಾತನಾಡುತ್ತಿರುವುದು ಶೋಚನೀಯ. ಅಂಬೇಡ್ಕರ್ ಸಂವಿಧಾನವನ್ನು ಕೊಡುಗೆಯಾಗಿ ನೀಡದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತಿತ್ತು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕೀರಪ್ಪ ಪ್ರಾಸ್ಥಾವಿಕ ಮಾತನಾಡಿದರು. ಚಿತ್ರದುರ್ಗ ಕೋಡಿಹಳ್ಳಿ ತೋಂಟದಾರ್ಯ ಆದಿಜಾಂಬವ ಮಠದ ಶ್ರೀ ಷಡಕ್ಷರಿ ಸ್ವಾಮಿಗಳು, ಟಿಬೆಟಿಯನ್ ಕಾಲನಿಯ ಬೌದ್ಧ ಮಠದ ಮುಖ್ಯಸ್ಥರಾದ ಜಾಂಗ್ಚುಪ್ ಸಾಂಗೆ, ಜಿಗ್ಸೆ ಲಾಮಸಾಗ್, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಎಸ್.ಡಿ. ಮುಡೆಣ್ಣವರ, ರಫೀಕ್ ಇನಾಮದಾರ, ಜ್ಞಾನದೇವ ಗುಡಿಯಾಳ, ಇತರರು ಉಪಸ್ಥಿತರಿದ್ದರು.