

ಅಣ್ಣಿಗೇರಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ವಚನಗಳಿಂದ ಆಧ್ಯಾತ್ಮಿಕ ಚಳವಳಿ ನಡೆಯಿತು. ಪ್ರತಿಯೊಬ್ಬರೂ ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಸ್ಥಳೀಯ ದಾಸೋಹ ಮಠದ ರುದಮುನಿ ಶ್ರೀಗಳ 61ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ‘ನಿಜಗುಣ ಶಿವಯೋಗಿಗಳ ಕೈವಲ್ಯ ಶಾಸ್ತ್ರದ ಪರಣಸಂಕುಳದ ಮಾನಸ ನಿಜಸಂಗ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರ ಸಂಗವ ಮಾಡಿದರೆ ಅಂತರಂಗದಲ್ಲಿ ಪರಮಾತ್ಮನ ಗುರುವಿನ ದರ್ಶನ ಮಾಡಿದಂತೆ. ಅಂದಿನ ದಿನಮಾನಗಳಲ್ಲಿ ಅಂದಾಜು ಸಾವಿರ ಕಿ.ಮೀ. ದೂರದಲ್ಲಿನ ಅಪ್ಘಾನಿಸ್ಥಾನದಿಂದ ಮರುಳ ಶಂಕರ ದೇವರು ನಾಡಿಗೆ ಬರುತ್ತಿದ್ದರು ಎಂದು ವಚನಗಳ ಮಹತ್ವ ಸಾರಿ ಹೇಳುತ್ತವೆ. ಕಲ್ಯಾಣದಲ್ಲಿ ಅತ್ಮಜಾಗೃತಿ ಅಭಿಯಾನ ನಡೆಯಿತು. ಅಂದಿನ ದಿನ ಕಬ್ಬಿಣ ಕಡಲೆಯಂತಹ ಸೂತ್ರ(ವಚನ)ವನ್ನು ನಿಜಗುಣ ಶಿವಯೋಗಿಗಳು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಕನ್ನಡಕ್ಕೆ ಭಾಷಾಂತರಿಸಿದ್ದಾರೆ ಎಂದು ತಿಳಿಸಿದರು.
ಡಾ.ಶಿವಕುಮಾರ ಸ್ವಾಮೀಜಿಯವರ ನೇತೃತ್ವದಲ್ಲಿ ಗೋಷ್ಠಿಗೆ ಚಾಲನೆ ನೀಡಲಾಯಿತು. ಹೊಸಯರಗುದ್ರಿ ಈದಾಲಿಂಗೇಶ್ವರ ಮಠದ ಸಿದ್ಧಪ್ರಭು ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗದುಗಿನ ಶ್ರೀ ಮುಕ್ಕಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು ಮಾತೋಶ್ರೀ ಶ್ರೀದೇವಿ ತಾಯಿಯವರು ಹಾಗೂ ಹರಗುರು ಚರಮೂರ್ತಿಗಳು ಆಶೀರ್ವಚನ ನೀಡಿದರು. ಪ್ರಸಾದ ಸೇವೆ ಹಾಗೂ ದೇಣಿಗೆ ಸಲ್ಲಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಕಿರೀಟ ಪೂಜೆ ನೆರವೇರಿಸಲಾಯಿತು. ನಿರಂತರ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ ದೇಸಾಯಿ, ಮಹೋತ್ಸವದ ಅಧ್ಯಕ್ಷ ಮಹಾದೇವಪ್ಪ ದಿಡ್ಡಿ, ಅಭಿಷೇಕ ಅಮಡ್ಗ, ಷಣ್ಮುಖ ತೋಟಾಕಾವು, ಶಶಿಧರ ಮುಖಂಡಮಠ, ಬಸವರಾಜ ಯಳವತ್ತಿ, ಇತರರಿದ್ದರು.