ದಸರಾ ಎಲ್ಲರಿಗೂ ಶಕ್ತಿ, ಭಕ್ತಿ ತುಂಬಲಿ: ಅಶ್ವಿನಿ ಪುನೀತ್ ರಾಜ್‌ಕುಮಾರ್

52
Published on

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಎಲ್ಲರಿಗೂ ಧೈರ್ಯ, ಶಕ್ತಿ, ಭಕ್ತಿಯನ್ನು ತುಂಬಲಿ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಶಿಸಿದರು.
ನಗರ ಹೊರವಲಯ ಉತ್ತನಹಳ್ಳಿಯಲ್ಲಿ ಆಯೋಜಿಸಿದ ಯುವ ದಸರಾಲ್ಲೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಸರಾ ಪ್ರತಿಯೊಬ್ಬರಿಗೂ ಕೂಡ ಬಹು ದೊಡ್ಡ ಹಬ್ಬವಾಗಿದ್ದು, ಈ ಹಬ್ಬದಂದು ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಧೈರ್ಯ, ಶಕ್ತಿ, ಭಕ್ತಿಯನ್ನು ನೀಡಿ ಪ್ರತಿಯೊಬ್ಬರನ್ನು ಕಾಪಾಡಲಿ ಪ್ರಾರ್ಥಿಸಿದರು.
ದಸರಾ ಮೈಸೂರು ಇತಿಹಾಸವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬ ಮೈಸೂರಿನ ಜತೆಗೆ ನಾಡಿನ ಮೆರಗನ್ನು ಹೆಚ್ಚಿಸುವ ಹಬ್ಬವಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿರುವ ವಿವಿಧ ರಾಷ್ಟ್ರ ರಾಜ್ಯ ಜಿಲ್ಲೆಯ ಜನತೆಗೆ ದಸರಾ ಶುಭಾಶಯಗಳನ್ನು ತಿಳಿಸಿದರು.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಈ ಬಾರಿ ಅದ್ದೂರಿಯಾದ ದಸರಾ ಕಾರ್ಯಕ್ರಮ್ನ ಆಯೋಜಿಸಲಾಗಿದೆ. ವಿಜೃಂಭಣೆಯಿಂದ ಈ ಬಾರಿ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಜತೆಗೆ ಈ ದಿನ ಬನ್ನಿಮಂಟಪದಲ್ಲಿ 1500 ಡ್ರೋನ್ ಶೋ ಅನ್ನು ಆಯೋಜಿಸಲಾಗಿದೆ ಜತೆಗೆ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯ್ರಮಗಳು, ಕವಿಗೋಷ್ಠಿ, ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರೂ ಕಾರ್ಯಕ್ರಮಗಳನ್ನು ವೀಕ್ಷಿಸಿಬೇಕು ಎಂದು ಕೋರಿದರು.
ಪ್ರತಿಯೊಬ್ಬರೂ ಕೂಡ ಸಂವಿಧಾನದ ಆಶಯಗಳನ್ನು ಪಾಲನೆ ಮಾಡುತ್ತಾ ಸಂವಿಧಾನ ಬದ್ಧವಾಗಿ ಬದುಕೋಣ ನಮ್ಮ ನಾಡನ್ನು ಸಂವಿಧಾನದ ಆಶಯದಂತೆ ನಡೆಸುತ್ತಾ ನಾಡಿನ ಜನರ ಸುರಕ್ಷತೆಯನ್ನು ಕಾಪಾಡುವಲ್ಲಿ ನಮ್ಮ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರವು ಸದಾ ನಿಮ್ಮ ಜತೆಯಲ್ಲಿರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಯ ಸನ್ನಿಧಿಯ ಆವರಣದಲ್ಲಿ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ಕಣ್ಮಣಿಯಾಗಿದ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಅವರ ಧರ್ಮ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಮೈಸೂರು ರಾಜರ ನಾಡು ಹಾಗೇ ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಆತಿಥ್ಯವನ್ನು ನೀಡಿ ದಸರಾಗೆ ಮೆರುಗು ತರಬೇಕು ಎಂದರು.
ಚಾಮರಾಜನಗರ ಸಂಸದ ಸುನೀಲ್ ಬೋಸ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಶಾಸಕ ಅನಿಲ್ ಚಿಕ್ಕಮಾದು, ಹರೀಶ್‌ಗೌಡ, ತನ್ವೀರ್ ಸೇಠ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net