ಇಂದಿನ ಸಮಾಜಕ್ಕೆ ‘ದೊರೆ ಮಹಾದೇವ ಭೂಪಾಲ’ ಆದರ್ಶವಾಗಿರಲಿ

shirol pravachana
Published on

ಶಿರೋಳ: ಆಸೆ ಎಂಬುದು ಅರಸಂಗಲ್ಲದೇ ಅಜಾತರಿಗುಂಟೆ ಅಯ್ಯಾ ಎನ್ನುವಂತೆ ಆಸೆ ಇರಬೇಕು ಆದರೆ, ದುರಾಸೆ ಇರಬಾರದು ಎಂದು ಶಶಿಧರ ಶಾಸ್ತ್ರೀಗಳು ಹಿರೇಮಠ ಹೇಳಿದರು.

ಸ್ಥಳೀಯ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರದ ಲೋಕಾರ್ಪಣೆ ನಿಮಿತ್ತ ಆಯೋಜಿಸಿದ್ದ 20ನೇ ದಿನದ ಬಸವ ಪುರಾಣದಲ್ಲಿ ಅವರು ಪ್ರವಚನ ನೀಡಿದರು.

ಪ್ರಜೆಗಳೇ ದೇವರೆಂದು ತಿಳಿದಿದ್ದ ಕಾಶ್ಮೀರದ ದೊರೆ ಮಹಾದೇವ ಭೂಪಾಲ ನಿತ್ಯ ಜಂಗಾಮಾರ್ಚನೆ ಇಲ್ಲದೆ ಪ್ರಸಾದ ಸೇವಿಸುತ್ತಿರಲಿಲ್ಲ, ಕಲ್ಯಾಣದಲ್ಲಿ ದೊಡ್ಡ ಸಂಖ್ಯೆಯ ಕಾಯಕದ ಶರಣರು ಬಸವಣ್ಣನವರ ಅನುಯಾಯಿಗಳಾಗಿರುವುದನ್ನು ತಿಳಿದು ಕಲ್ಯಾಣಕ್ಕೆ ಬಂದನು. ಕೊಲ್ಲಲು ಬಂದ ಚಿಕ್ಕಣ್ಣ ಬಸವಣ್ಣನವರ ಒಂದೇ ವಚನ ಮೌನದಲಿ ಉಂಬುವುದು ಆಚಾರವಲ್ಲ ಲಿಂಗಾರ್ಚನೆ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವ ನಾಮ ಜಪಿಸಬೇಕು ಎನ್ನುವುದನ್ನು ಕೇಳಿ, ವಚನ ಬರೆಯುವ ತಾಡೋಲೆಗಳನ್ನು ಅಡವಿಯಿಂದ ತಂದು ಮಾರುವ ಕಾಯಕದಲ್ಲಿ ನಿರತನಾದನು. ಚಿಕ್ಕಣ್ಣ ಶರಣಾನಾದ ಸುದ್ದಿ ತಿಳಿದ ಭೂಪಾಲನ ತಂಗಿ ಬೊಂತೆದೇವಿ ಕಲ್ಯಾಣದಲ್ಲಿ ಕೌದಿ ಹೊಲೆಯುವ ಕಾಯಕದಲ್ಲಿ ನಿರತಳಾದಳು. ದೊರೆ ಮಹಾದೇವ ಭೂಪಾಲನೊಂದಿಗೆ ಮಡದಿ ಗಂಗಾದೇವಿ ಪಟ್ಟದರಿಸಿಯಾಗಿರಲು ನಿರಾಕರಿಸಿ ಬಂಗಾರ ಬಿಚ್ಚಿಟ್ಟು ಕಲ್ಯಾಣಕ್ಕೆ ಬಂದಳು. ಬಳಿಕ ಕಟ್ಟಿಗೆ ಕಡಿಯುವ ಕಾಯಕದಿಂದ ಮೋಳಿಗೆ ಮಾರಯ್ಯನಾದನು. ಹಣ ಬಂಗಾರ ಅರಮನೆ ತ್ಯಜಿಸಿ ಬಂದ. ಆಸೆ ಇದ್ದಿದ್ದರೆ ಸ್ಮಶಾನಕ್ಕೆ ಹೋಗುತ್ತಿದ್ದೆ, ಆಸೆಯನ್ನು ಬಿಟ್ಟು ಕಲ್ಯಾಣಕ್ಕೆ ಬಂದಿದ್ದೇನೆ ಎಂದ ದೊರೆ ಮಹಾದೇವ ಭೂಪಾಲ ಇಂದಿನ ಸಮಾಜಕ್ಕೆ ಆದರ್ಶವಾಗಿರಬೇಕು ಎಂದರು.

ಈ ವೇಳೆ ರಾಷ್ಟ್ರ ಮಟ್ಟದ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಶಿರೋಳ ಗ್ರಾಮದ ಮಣಿಕಂಠ ಮುತ್ತಪ್ಪ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಯಲಿಬಳ್ಳಿ, ಗುರಬಸಯ್ಯ ನಾಗಲೋಟಿಮಠ, ವೀರಯ್ಯ ದೊಡಮನಿ, ಕುಮಾರ ಮರೆಗುದ್ದಿ, ಲೋಕಪ್ಪ ಕರಕೀಕಟ್ಟಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಗುರುಬಸವ ಶೆಲ್ಲಿಕೇರಿ, ಪ್ರಭಾಕರ ಉಳ್ಳಾಗಡ್ಡಿ, ಪ್ರಭು ಹದ್ಲಿ, ಮಲ್ಲಪ್ಪ ಸಂಗಳದ, ಶಂಕರಗೌಡ ಗಿರಿಯಪ್ಪಗೌಡ, ಶಂಕರಪ್ಪ ಕುಪ್ಪಸ್ತ, ಶ್ರೀಕಾಂತ ದೊಡಮನಿ, ಶ್ರೀಧರ ಬೇವಿನಕಟ್ಟಿ, ಇತರರಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net