

ಹುಣಸೂರು: ಈ ನೆಲದ ಜನ್ಮದತ್ತ ಇಂಜಿನಿಯರ್‌ಗಳು ಎಂದೆನಿಸಿಕೊಂಡಿರುವ ಭೋವಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಿದೆ ಎಂದು ತಾಲೂಕು ಭೋವಿ ಸಮುದಾಯದ ಮುಖಂಡ ಮತ್ತು ನಿವೃತ್ತ ಎಂಜಿನಿಯರ್ ಬೋಜರಾಜ್ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ದರಾಮೇಶ್ವರ, ಅಂಬಿಗರ ಚೌಡಯ್ಯ ಮತ್ತು ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭೋವಿ ಸಮದಾಯದವರ ಆರಾಧ್ಯ ದೈವ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಿದ್ದ ಕೆರೆಕಟ್ಟೆ ನಿರ್ಮಾಣದಲ್ಲಿ ತೊಡಗಿಸಿಕೊಂಡು ಸರ್ವ ಸಮುದಾಯದವರಿಗೂ ಆರಾಧ್ಯರಾಗಿದ್ದರು. ಕಾಲಕ್ರಮೇಣ ಅಲ್ಲಮಪ್ರಭು ಸಿದ್ಧಾಂತಗಳಿಂದ ಪ್ರೇರಿತರಾದರು. ಧಾರ್ಮಿಕ ಹಾದಿಯಲ್ಲಿ ಸಾಧನೆ ಅಗತ್ಯವಿದೆ ಎಂದು ತಿಳಿಹೇಳಿ ಬಸವಣ್ಣನವರ ಅನುಭವ ಮಂಟಪ ದೀಕ್ಷೆ ಪಡೆದು ಶಿವಯೋಗಿ ಸಿದ್ದರಾಮೇಶ್ವರರಾಗಿ ತಮ್ಮ ಕಾಯಕ ಮುಂದುವರೆಸಿದ ಮಹಾನ್ ಯೋಗಿ ಎಂದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ನದಿ ದಂಡೆಯಲ್ಲಿ ದೋಣಿ ನಡೆಸುತ್ತಿದ್ದ ಅಂಬಿಗರ ಚೌಡಯ್ಯ ತಮ್ಮ ವೃತ್ತಿ ಜೀವನದೊಂದಿಗೆ ವಚನ ಸಾಹಿತ್ಯ ರಚಿಸುವ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಪ್ರಯತ್ನದಲ್ಲಿ ತೊಡಗಿದ್ದ ವಚನಕಾರರು. ಇವರ ಸೇವೆಯನ್ನು ಕಂಡು ಬಸವಣ್ಣನವರ ಅನುಭವ ಮಂಟಪದಲ್ಲಿ ಗೌರವಿಸಲಾಯಿತು ಎಂದರು.
ವೇಮನ ಮಹಾಯೋಗಿ ಆಗಿದ್ದು, ತೆಲುಗು ಭಾಷೆಯಲ್ಲಿ ಭಾರತೀಯ ತತ್ವಜ್ಞಾನಿ ಮತ್ತು ಕವಿ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತ್ರಿಪದಿ ರಚಸಿದ ಮೂರನೇ ಪ್ರಮುಖರು. ಈವರೆಗೆ ತ್ರಿಪದಿ ಸಾಹಿತ್ಯದಲ್ಲಿ ತಿರುವಳ್ಳುವರ್, ಸರ್ವಜ್ಞರ ನಂತರದಲ್ಲಿ ವೇಮನ ಸೇರಿದ್ದಾರೆ ಎಂದರು.
ಭೋವಿ ಸಮುದಾಯದ ಮುಖಂಡ ಕೊಂಡಯ್ಯ, ಪ್ರೇಮರೆಡ್ಡಿ, ನಟರಾಜ ರೆಡ್ಡಿ, ಪ್ರಶಾಂತ್ ರೆಡ್ಡಿ, ಡಿ.ಕುಮಾರ್, ಮೋದೂರು ಮಹೇಶಾರಾಧ್ಯ, ಎಸ್.ಜಯರಾಂ, ನಗರಸಭೆ ಆಯುಕ್ತೆ ಕೆ.ಮಾನಸ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ನರಸಿಂಹಯ್ಯ ಇತರರು ಇದ್ದರು.