

ಭಟ್ಕಳ: ತಾಯ್ನುಡಿ ಕನ್ನಡವನ್ನು ನಾವು ಬಳಸಬೇಕು, ಬೆಳೆಸಬೇಕು. ಕನ್ನಡದಲ್ಲೇ ವ್ಯವಹರಿಸಿ, ಕನ್ನಡದಲ್ಲೇ ಮಾತನಾಡಿ ಕನ್ನಡ ಸಾಹಿತ್ಯ ರಚಿಸಿ, ಕನ್ನಡವನ್ನು ಬಲ ಪಡಿಸೋಣ. ಭಾಷೆ ಬೆಳೆಯಲು, ಉಳಿಯಲು ಸಾಹಿತ್ಯ ಸಮ್ಮೇಳನ ನಿರಂತರವಾಗಿರಬೇಕು ಎಂದು ಸಾಹಿತಿ ನಾರಾಯಣ ಯಾಜಿ ಹೇಳಿದರು.
ತಾಲೂಕಿನ ಅಳ್ವೆಕೋಡಿಯಲ್ಲಿ ಮಂಗಳವಾರ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಟ್ಕಳ ಬಹು ಸಂಸ್ಕೃತಿಯ ನೆಲ. ಇಲ್ಲಿ ಎಲ್ಲ ಧರ್ಮೀಯರೂ ಸಾಮರಸ್ಯದಿಂದ ಇದ್ದಾರೆ. ಈ ಭ್ರಾತೃತ್ವವನ್ನು ಮುಂದುವರಿಸಿ ಸರ್ವಜನಾಂಗದ ಶಾಂತಿಯ ತೋಟವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಸಾಹಿತ್ಯದಿಂದ ಓದುಗನಲ್ಲಿ ಒಳ್ಳೆಯ ಸಂಸ್ಕಾರ ಹುಟ್ಟುವಂತಾಗಬೇಕು. ಮನೆಗಳಲ್ಲಿ ಒಳ್ಳೆಯ ಪುಸ್ತಕ, ಪತ್ರಿಕೆಗಳ ಒಡನಾಟ ಇರಬೇಕು. ಅಂತಹ ಪರಿಸರದಲ್ಲಿ ಬೆಳೆದ ಮಗು ಒಳ್ಳೆಯ ಓದುಗ, ಒಳ್ಳೆಯ ಚಿಂತಕ, ಒಳ್ಳೆಯ ಪ್ರಜೆಯಾಗುತ್ತಾನೆ ಎಂದ ಅವರು ಭಾಷಣದಲ್ಲಿ ತಾಯಿಯನ್ನು ನೆನೆದು ಬಾವುಕರಾದರು. ಹೆಂಡತಿಯನ್ನು ನೆನಪಿಸಿಕೊಂಡಾಗಲೂ ಯಾಜಿ ಅವರ ಕಣ್ಣು ತೇವಗೊಂಡವು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ, ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿದರು. ಹಿರಿಯ ಸಾಹಿತಿ ಡಾ. ಸರಾಫ್, ಮಾನಸುತ ಶಂಭು, ಶಿಕ್ಷಕ ಶ್ರೀಧರ ಶೇಟ್, ವಿಶ್ರಾಂತ ನ್ಯಾಯಾಧೀಶ ರವಿ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ಮೊಗೇರ, ಅಳ್ವೆಕೋಡಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಟ್ರಸ್ಟಿ ನಾರಾಯಣ ದೈಮನೆ, ಅರವಿಂದ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಮಾರಿಜಾತ್ರೆ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ ಇತರರು ಇದ್ದರು.
-------------ಬಾಕ್ಸ್-------
ವಿಜಯವಾಣಿ ಕೊಡುಗೆ
ಪತ್ರಿಕೆಗಳು ಕನ್ನಡ ಭಾಷೆ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡುತ್ತಿವೆ. ಇದಕ್ಕೆ ನವೆಂಬರ್ ತಿಂಗಳಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಶ್ರೀವತ್ಸ ಜೋಷಿ ನಡೆಸಿಕೊಟ್ಟ ‘ಕಟ್ಟುವೆವು ನಾವು ಕನ್ನಡ ಪದ ಒಂದನು’ ಶೀರ್ಷಿಕೆ ಅದ್ಭುತ ಯಶಸ್ಸು ಕಂಡಿರುವದೊಂದು ಉದಾಹರಣೆ ಈ ಶೀರ್ಷಿಕೆಯಡಿ ನಿತ್ಯ ಬಳಕೆಯ 27 ಆಂಗ್ಲ ಪದಗಳಿಗೆ ಸುಲಭದ ಕನ್ನಡಪದ ಕಟ್ಟಿಕೊಡಲಾಯ್ತು ಎಂದು ನಾರಾಯಣ ಯಾಜಿ ಮೆಚ್ಚುಗೆ ವ್ಯಕ್ತಪಡಿಸಿದರು.