

ಹೊಸದುರ್ಗ: ನಾಡಿನಾದ್ಯಂತ ಬಸವತತ್ವ ಪಸರಿಸಬೇಕು ಎಂಬ ಆಶಯದೊಂದಿಗೆ ಕೈಗೊಂಡ ‘ನೀನಲ್ಲದೆ ಮತ್ತಾರು ಇಲ್ಲವಯ್ಯ’ ಎನ್ನುವ ದೇಶದ ಪ್ರಪ್ರಥಮ ವಚನ ಸಂಸ್ಕೃತಿ ಅಭಿಯಾನ ಯಶಸ್ಸು ಕಂಡಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಾಣೆಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ನೀನಲ್ಲದೆ ಮತ್ತಾರು ಇಲ್ಲವಯ್ಯ ವಚನ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಾದಿ ಶರಣರ ತತ್ವಗಳನ್ನು ದೇಶದ ತುಂಬಾ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಅಭಿಯಾನದಲ್ಲಿ ಪಾಲ್ಗೊಂಡ 24 ಜನ ಕಲಾವಿದರು ಮನೋಜ್ಞವಾದ ಪ್ರದರ್ಶನ ನೀಡಿದ್ದಾರೆ. ಇವರೆಲ್ಲರೂ ಪದವೀಧರರಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಬಸವಣ್ಣನ ವಚನಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಇವರ ಜತೆ ತಂತ್ರಜ್ಞರು, ರಂಗಸಂಘಟಕ ಶ್ರೀನಿವಾಸ ಕಪ್ಪಣ್ಣ, ಅಭಿಯಾನದ ವಚನ ನೃತ್ಯ ಸಂಯೋಜಕಿ ಸ್ನೇಹಾ ಕಪ್ಪಣ್ಣ ಶ್ರಮಿಸಿದ್ದಾರೆ. ಅಭಿಯಾನ ತಾತ್ಕಾಲಿಕವಾಗಿ ಮುಕ್ತಾಯವಾಗಿದ್ದು, ಜನರ ಒತ್ತಾಯದ ಮೇರೆಗೆ ಮರು ಆರಂಭವಾಗಲಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶ್ವನಾಥ್ ಪಿ.ಹಿರೇಮಠ ಮಾತನಾಡಿ, ಮನುಷ್ಯತ್ವದ ನಡುವಿನಲ್ಲಿ ವರ್ಗಗಳು ನಿರ್ಮಾಣವಾಗಿರುವ ಸಂದರ್ಭದಲ್ಲಿ ಜಗತ್ತಿಗೆ ಬಸವಾದಿ ಶರಣರ ತತ್ವಗಳನ್ನು ತಲುಪಿಸುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಬಸವಾದಿ ಶರಣರ ಚಿಂತನೆಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಶ್ರೀಗಳಿಗೆ ನೀಡುವ ನಿಜವಾದ ಗೌರವವಾಗಲಿದೆ. ಜಾತಿ ವ್ಯವಸ್ಥೆಗಳನ್ನು ತೊಡೆದು ಹಾಕಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
14 ರಾಜ್ಯಗಳಲ್ಲಿ 52 ಪ್ರದರ್ಶನ ನೀಡಿದ ನೃತ್ಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೌರವಿಸಲಾಯಿತು.
ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವ ನಾಗಿದೇವ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಇದ್ದರು.
ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಂಗಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ, ಚಂದ್ರಾ ಅಶ್ವಥ್ ಇತರರಿದ್ದರು.
ಅಭಿಯಾನ ಯಶಸ್ಸು: ಸಾಣೇಹಳ್ಳಿ ಶ್ರೀಗಳು ಕಲೆಯನ್ನು ಪೋಷಿಸುವ ಜತೆಗೆ ಸಾಧಕರ ತತ್ವಗಳನ್ನು ನಾಡಿಗೆ ಪರಿಚಯಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಹಲವು ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ದೇಶದ 14 ರಾಜ್ಯಗಳಲ್ಲಿ ವಚನ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವುದು ಮಾದರಿ ಕಾರ್ಯ ಆಗಿದೆ- ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ