

ತೇರದಾಳ: ವೈದ್ಯರು ಸೇವಾ ಮನೋಭಾವನೆ ಬೆಳಸಿಕೊಳ್ಳುವ ಜತೆಗೆ ನಮ್ಮ ಪ್ರಾಚೀನ ಸಂಸ್ಕೃತಿಯ ಆಯುರ್ವೇದ ಉಳಿಸಿ ಬೆಳಸುವ ಕಾರ್ಯ ಮಾಡಬೇಕಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣ ದಾನಿಗೊಂಡ ಸಂಸ್ಥೆಯ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ 19ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸ್ಫೂರ್ತಿ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದಾನಿಗೊಂಡ ಸಂಸ್ಥೆ ಮುಂಚೂಣಿಯಲ್ಲಿದೆ. ನಿರಂತರ ಬದಲಾವಣೆಗಳ ಮೂಲಕ, ವಿನೂತನ ವ್ಯವಸ್ಥೆ ಪರಿಚಯಿಸಿ ಶಿಕ್ಷಣ ನೀಡಲಾಗುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆ ತಿಳಿಸುವ ವಿಚಾರ ಗೋಷ್ಠಿಗಳನ್ನು ಆಯೋಜಿಸಿ ದೇಶ ಸೇವೆಯ ಭಾವನೆ ಮೂಡಿಸಿ ಎಂದರು.
ಬೆಂಗಳೂರು ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯ ಡಾ. ವಿರೇಶ ಹಂಚಿನಾಳ ಮಾತನಾಡಿ, ಆಯುರ್ವೇದ ಕ್ಷೇತ್ರದಲ್ಲಿ ಉತ್ತಮ ಚಿಕಿತ್ಸೆಗಳ ಮೂಲಕ ರೋಗಿಗಳನ್ನು ಗುಣಪಡಿಸಲಾಗುತ್ತಿರುವುದರಿಂದ ಇಂದು ತನ್ನತ್ತ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ ಎಂದರು.
ಸಂಸ್ಥೆಯ ಚೇರಮನ್ ಡಾ. ಮಹಾವೀರ ದಾನಿಗೊಂಡ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ, ವಿದ್ಯಾರ್ಥಿ ಪ್ರತಿನಿಧಿ ವಿಶ್ವನಾಥ ಕಾಗವಾಡ, ರತ್ನಾ ದಲ್ಲಾಳಿ ಮತ್ತಿತರರಿದ್ದರು. ಪ್ರಾಚಾರ್ಯ ಡಾ. ಪ್ರಭಾಕರ ಅಪರಾಜ ವರದಿ ವಾಚಿಸಿದರು.