ಸಂಸ್ಕೃತದಂತೆ ಜ್ಯೋತಿಷವೂ ವಿಶ್ವಮಾನ್ಯವಾಗಲಿ

ylp ummachagi
Published on

ಯಲ್ಲಾಪುರ: ಸಂಸ್ಕೃತ ವಿಶ್ವಮಾನ್ಯವಾದಂತೆ ಜ್ಯೋತಿಷವೂ ವಿಶ್ವಮಾನ್ಯವಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್. ಅಹಲ್ಯಾ ಶರ್ಮ ಹೇಳಿದರು.

ತಾಲೂಕಿನ ಉಮ್ಮಚಗಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ಜ್ಞೋತಿರ್ವಿಜ್ಞಾನ ಸಂಪ್ರತಿಷ್ಠಾನಂ, ಕುಮಟಾ ಹೆಗಡೆಯ ವೇದ ಸಂಸ್ಕೃತ ಅಕಾಡೆಮಿ ಹಾಗೂ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ನವದೆಹಲಿ ಆಶ್ರಯದಲ್ಲಿ ಗುರುನಮನಂ ಶಾಸ್ತ್ರಚಿಂತನಂ ವೇದ, ಜ್ಯೋತಿಷ್ಯ, ಆಯುರ್ವೆದಗಳ ಕುರಿತಾಗಿ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಯೋತಿಷದ ಮಹತ್ವ ಸಾರುವ ನೆಲೆಯಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಕೇಂದ್ರದಲ್ಲಿ ಪ್ರಕೃತಿಯ ನಡುವೆ ಶಾಸ್ತ್ರೀಯ ರೂಪದಲ್ಲಿ ಸುಂದರ ತಾಣ ಸ್ಥಾಪಿಸಿರುವುದು ಉತ್ತಮ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ. ಗಜಾನನ ಭಟ್ಟ ಮಾತನಾಡಿ, ಸಂಸ್ಕೃತ ಎಲ್ಲ ಭಾಷೆಗಳಿಗೂ ಪೂರಕವಾಗಿದೆ. ಕೇವಲ ಭಾಷಾ ಕಲಿಕೆಯ ದೃಷ್ಟಿಯಿಂದ ಸಂಸ್ಕೃತ ಕಲಿತರೆ ಅದು ಉಳಿಯದು. ಶಾಸ್ತ್ರಾಧ್ಯಯನದ ಮೂಲಕ ವೇದಾಧ್ಯಯನ ಮಾಡಿದರೆ ನಮ್ಮ ಭವ್ಯ ಪರಂಪರೆಯಿಂದ ಬಂದ ವೈದಿಕ ಧರ್ಮವನ್ನು ಉಳಿಸಬಹುದಾಗಿದೆ. ವೈದಿಕ ಶಿಕ್ಷಣ ಉಳಿಸುವಲ್ಲಿ ನಮ್ಮೆಲ್ಲ ಪಾಠಶಾಲೆಗಳು ಮುಂದಾಗಬೇಕು ಎಂದರು.

ಜ್ಯೋತಿಷಿ ವಿ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿದರು. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀನಿವಾಸ ವರ್ಕೆರಿ, ಬೆಂಗಳೂರು ಉತ್ತರ ಪ್ರಾಂತದ ಉಪಕುಲಪತಿ ಡಾ. ನಿರಂಜನ ವಾನಳ್ಳಿ, ಕುವೆಂಪು ವಿವಿಯ ಡಾ.ಶರತ್ ಅನಂತಮೂರ್ತಿ ಅವರ ಸಂದೇಶವನ್ನು ಡಾ. ಮಹೇಶ ಭಟ್ಟ ವಾಚಿಸಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಕೆ.ಸಿ. ನಾಗೇಶ ಅವರ ಶಿಷ್ಯ ಸುಮಂತ ಅನಂತಮೂರ್ತಿ ಮಂಜಗುಣಿ ಅವರನ್ನು ಸನ್ಮಾನಿಸಲಾಯಿತು. ಕುಮಟಾದ ವಿ. ಗಣಪತಿ ಕುಪ್ಪಯ್ಯ ಹೆಗಡೆ ಬರೆದ ‘ಸೂರ್ಯಸಿದ್ಧಾಂತ ಸೂರ್ಯರಶ್ಮಿ ಕಾಮದೋಗ್ದಿ’ ವ್ಯಾಖ್ಯಾನ ಗ್ರಂಥ ಹಾಗೂ ಡಾ.ಕೆ.ಸಿ.ನಾಗೇಶ ಬರೆದ ‘ಸೂರ್ಯರಶ್ಮಿ ಮಂಟಪಂ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಜ್ಯೋತಿಷರತ್ನ ಪ್ರೊ.ಎಸ್. ಶ್ರೀನಿವಾಸ ಅಡಿಗ ಸಾಲಿಗ್ರಾಮ, ಜ್ಯೋತಿಷಭಾಸ್ಕರ ವೇ.ಮೂ. ನಾಗೇಂದ್ರ ಭಟ್ಟ ಹಿತ್ಲಳ್ಳಿ, ಅಥರ್ವವೇದ ವೇದ ಸಂಸ್ಕೃತ ಅಕಾಡೆಮಿ ಅಧ್ಯಕ್ಷ ವಿ.ರಮೇಶ ವರ್ಧನ್, ಸಂಘಟಕ ಡಾ.ಕೆ.ಸಿ. ನಾಗೇಶ ಭಟ್ಟ, ಇತರರು ಉಪಸ್ಥಿತರಿದ್ದರು.

ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಡಾ.ಗೋಪಲಾಕೃಷ್ಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವೀಂದ್ರ ಭಟ್ಟ ಸೂರಿ ಮತ್ತು ಡಾ.ಮಹೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನದ ಅಧ್ಯಕ್ಷೆ ಡಾ.ನಿವೇದಿತಾ ಎಂ. ವಂದಿಸಿದರು. ನಂತರ ಜ್ಯೋತಿಷ, ಆಯುರ್ವೆದ ಹಾಗೂ ವೇದದ ಕುರಿತು ಗೋಷ್ಠಿಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net