

ಹೊನ್ನಾವರ: ಕಾಸರಕೋಡದ ಮಾತ್ರಛಾಯಾ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದಲ್ಲಿ ನೀನಾಸಂ ನಾಟಕ ಪ್ರದರ್ಶನ ನಡೆಯಿತು. ಸೋಮವಾರ ಮತ್ತು ಮಂಗಳವಾರ ಪ್ರದರ್ಶನಗೊಂಡ ‘ಮಾಲತಿ ಮಾಧವ’ ಮತ್ತು ‘ಅಂಕದ ಪರದೆ’ ನಾಟಕ ಜನಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ನೀನಾಸಂನಲ್ಲಿ ತರಬೇತಿ ಪಡೆದವರು ರಾಷ್ಟ್ರಮಟ್ಟದಲ್ಲಿ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ಚಟುವಟಿಗಳಲ್ಲಿ ಹೆಸರು ಗಳಿಸಿದ್ದಾರೆ. ವೈಶಿಷ್ಟತೆ ಹೊಂದಿರುವ ಈ ನಾಟಕ ತಂಡವು ಹಲವು ವರ್ಷಗಳಿಂದ ಹೊನ್ನಾವರದಲ್ಲಿ ಪ್ರತಿ ವರ್ಷ ಪ್ರದರ್ಶನ ನೀಡುತ್ತ ಬಂದಿದೆ. ಕಲೆಯು ಹೊಸ ಜ್ಞಾನದ ಬೆಳಕನ್ನು ತುಂಬಲಿ ಎಂದರು.
ಮಾತ್ರಛಾಯಾ ಟ್ರಸ್ಟ್ ಅಧ್ಯಕ್ಷ ಅಶೋಕ ಕಾಸರಕೋಡ ಪ್ರಾಸ್ತಾವಿಕ ಮಾತನಾಡಿ, ಹೊನ್ನಾವರ ತಾಲೂಕಿನಲ್ಲಿ ಕಲೆಯನ್ನು ಆರಾಧಿಸುವ ಸಹೃದಯರಿದ್ದಾರೆ. ವಿಶಿಷ್ಟ ಶೈಲಿಯೊಂದಿಗೆ ಉತ್ತಮ ಸಂದೇಶವನ್ನು ಸಾರುವ ನೀನಾಸಂ ನಾಟಕವನ್ನು ನೋಡುವ ಪ್ರೇಕ್ಷಕ ವರ್ಗವಿದೆ. ಅವರಿಗಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತರಾದ ರಮೇಶ ಜಿ. ಮೇಸ್ತ, ರಾಜು ಗೌಡ, ಗಣಪತಿ ಮೇಸ್ತ, ಶ್ರೀನಾಥ ಕಾಮತ್ ಇದ್ದರು.