

ಮಹಾಲಿಂಗಪುರ: ಪೌರ ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಪುರಸಭೆ ಆವರಣದಲ್ಲಿ ಶುಕ್ರವಾರ ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗುತ್ತಿಗೆದಾರರು ಸರ್ಕಾರದಿಂದ ಹೆಚ್ಚು ಹಣ ಪಡೆದು ಕಾರ್ಮಿಕರಿಗೆ ಅಲ್ಪ ಸಂಭಾವನೆ ನೀಡುತ್ತಿದ್ದಾರೆ. ಅವರವರ ಪಾಲು ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಈ ಕುರಿತು ನಾನು ಅನೇಕ ಬಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಪೌರ ಕಾರ್ಮಿಕರ ಮುಷ್ಕರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪಟ್ಟಣವನ್ನು ಸುಂದರವಾಗಿಸಲು ಶ್ರಮಿಸುವ ಅವರ ಬೇಡಿಕೆಗಳು ಈಡೇರಿಸಬೇಕೆಂದರು.
ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಘಟನಾ ಕಾರ್ಯದರ್ಶಿ ರವಿ ಹಲಸಪ್ಪಗೋಳ ಮಾತನಾಡಿ, ಗುತ್ತಿಗೆ ಪದ್ಧತಿಯಿಂದ ಗುತ್ತಿಗೆ ಆಧಾರದಲ್ಲಿ ನೇಮಕವಾದವರಿಗೆ ಅನ್ಯಾಯವಾಗುತ್ತಿದೆ. ಇದು ನೇರವಾಗಿ ಏಜೆನ್ಸಿಗಳಿಗೆ ಲಾಭ ಮಾಡಿಕೊಟ್ಟಂತಾಗುತ್ತಿದೆ. ಕಾರ್ಮಿಕರನ್ನು ಶೋಷಣೆಗೊಳಪಡಿಸಲಾಗುತ್ತಿದೆ. ನಮಗೆ ಸೇವಾ ಭದ್ರತೆ ಇಲ್ಲ. ಕೆಲಸಕ್ಕೆ ತೆಗೆದುಕೊಂಡ ಏಜೆನ್ಸಿಯವರು ನಿಮ್ಮನ್ನು ತೆಗೆದು ಹಾಕುತ್ತೇವೆ ಎಂದು ಹೆದರಿಸುತ್ತಾರೆ. ಈಗಿನ ಪದ್ಧತಿ ಜೀತ ಪದ್ಧತಿಯಂತಿದ್ದು, ಇದನ್ನು ತೆಗೆದುಹಾಕಿ ನೇರವಾಗಿ ಸ್ಥಳೀಯ ಸಂಸ್ಥೆಗಳಿಂದ ವೇತನ ನೀಡುವಂತಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪೌರ ಕಾರ್ಮಿಕರ ಮುಖಂಡ ಎಂ.ಕೆ.ದಳವಾಯಿ, ಬಿಜೆಪಿ ಮುಖಂಡರಾದ ಈರಪ್ಪ ದಿನ್ನಿಮನಿ, ಚನಬಸು ಯರಗಟ್ಟಿ, ಲಕ್ಕಪ್ಪ ಪಾಟೀಲ, ಮಹಾಲಿಂಗ ಕುಳ್ಳೋಳ್ಳಿ, ಶಂಕರಗೌಡ ಪಾಟೀಲ, ಶಿವಾನಂದ ಅಂಗಡಿ, ಬಸವರಾಜ ಮಡಿವಾಳ ಇದ್ದರು.