ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಗಲಿ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ರಾಜ್ಯದಲ್ಲಿ ಕೃಷಿ ಕೂಲಿಕಾರರ ಜೀವನ ಮಟ್ಟ ಸುಧಾರಿಸಲು ಸರ್ಕಾರ ಕ್ರಮ ವಹಿಸಿ, ಅವರ ಮೇಲಿನ ಶೋಷಣೆ ತಪ್ಪಿಸಬೇಕು ಎಂದು ಕರ್ನಾಟಕ ಪ್ರಾಂತ ಜಿಲ್ಲಾ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಸಿದ್ದಗಂಗಪ್ಪ ಒತ್ತಾಯಿಸಿದರು.

ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಕೃಷಿ ಕೂಲಿಕಾರರ ಸಂಘದಿಂದ ಆಯೋಜಿಸಿದ್ದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಜು.25ರವರೆಗೂ ಶಿಬಿರ ನಡೆಯಲಿದ್ದು, ಸುಮಾರು 300 ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸರಿಯಾಗಿ ನ್ಯಾಯ ಸಿಗುತ್ತಿಲ್ಲ. ಪುರುಷ, ಮಹಿಳೆಯರ ಕೂಲಿ ಹಣದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೃಷಿ ಕೂಲಿಕಾರರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅವರಿಗೆ ಸರಿಯಾದ ಕೂಲಿ ಸಿಗುತ್ತಿಲ್ಲ. ಜತೆಗೆ ಗ್ರಾಪಂ ಸದಸ್ಯರಿಂದ ಶೊಷಣೆ ಹೆಚ್ಚುತ್ತಿದೆ. ಬಗರ್ ಹುಕುಂ ಭೂಮಿ ಮಂಜೂರಾಗುತ್ತಿಲ್ಲ. ವಸತಿಹೀನರಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಸುಮಾರು 35 ಸಾವಿರ ಕುಟುಂಬಗಳಿಗೆ ವಸತಿ ಕಲ್ಪಿಸಬೇಕಾಗಿದೆ. ಕೃಷಿ ಕೂಲಿಕಾರರ ಕಲ್ಯಾಣಕ್ಕಾಗಿ ಸಮಾಜ ಮುಂದಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ವೆಂಕಟರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಾಧ್ಯಕ್ಷ ಪುಟ್ಟಮಾದು, ಕಾರ್ಯದರ್ಶಿ ಚಂದ್ರಪ್ಪ, ಸಂಘಟನೆಯ ಪದಾಧಿಕಾರಿಗಳಾದ ರಾಧಮ್ಮ, ಮುನಿವೆಂಕಟಪ್ಪ, ಅಶ್ವತ್ಥಪ್ಪ, ವೆಂಕಟಲಕ್ಷ್ಮಮ್ಮ, ಜಯಮಂಗಲ, ಮುನಿಸ್ವಾಮಿ, ವೆಂಕಟರಮಣಪ್ಪ, ಅನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net