

ಕೊಟ್ಟೂರು: ಕೊಟ್ಟೂರು ಮಾರ್ಗವಾಗಿ ಸಂಚರಿಸುವ ರೈಲಿಗೆ ಕೊಟ್ಟೂರೇಶ್ವರ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಒತ್ತಾಯ ಮಾಡಲಾಗಿದೆ. ಅಲ್ಲದೆ, ಮಾ.7ರಂದು ರಥೋತ್ಸವ ದಿನ ವಿಶೇಷ ರೈಲು ಓಡಲಿದೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.
ಕಳೆದ ವರ್ಷ ಕೊಟ್ಟೂರೇಶ್ವರ ರಥೋತ್ಸವ ವೇಳೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದ ಅಣಜಿ ಕೊಟ್ರಪ್ಪರ ಪತ್ನಿ ಕವಿತಾಗೆ ಜೆಸ್ಕಾಂನ 5 ಲಕ್ಷ ರೂ. ಚೆಕ್ ಅನ್ನು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದಷ್ಟು ಬೇಗ ಎಪಿಎಂಸಿ ಆವರಣದಲ್ಲಿ ಕಾಯ್ದಿರಿಸಿದ ಸ್ಥಳದಲ್ಲಿ ಅಂಚೆ ಕಚೇರಿ ನಿರ್ಮಿಸಲಾಗುವುದು. ಅಲ್ಲದೆ ರಸ್ತೆ ವಿಸ್ತರಣೆಯಿಂದ ಬಜಾರ್ ಅಂಚೆ ಕಚೇರಿ ಸ್ಥಳಾಂತರಿಸಿದ್ದು, ಕಾಮಗಾರಿ ಮುಗಿದ ಬಳಿಕ ಅದೇ ಪ್ರದೇಶದಲ್ಲಿ ಕಚೇರಿ ಆರಂಭಿಸಲು ಇಲಾಖೆಗೆ ಸೂಚಿಸಲಾಗುವುದು. ನೂತನ ವಿಜಯನಗರ ಜಿಲ್ಲೆ ರಚನೆಯಾಗಿದ್ದು, ತಾಲೂಕು ಅಭಿವೃದ್ಧಿ ಹೊಂದುವ ನಿರೀಕ್ಷೆ ಇದೆ ಎಂದರು.
ಜೆಡಿಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ.ತಿಪ್ಪೇಸ್ವಾಮಿ ವೆಂಕಟೇಶ, ಬಿಜೆಪಿ ಮುಖಂಡ ಶೆಟ್ಟಿ ತಿಂದಪ್ಪ, ಹಗರಿಬೊಮ್ಮನಹಳ್ಳಿ ಮಂಡಲ ಅಧ್ಯಕ್ಷ ವೀರೇಶ, ಬಿಜೆಪಿ ಟೌನ್ ಅಧ್ಯಕ್ಷ ಬಿ.ಆರ್.ವಿಕ್ರಂ, ಡಾ.ರಾಕೇಶ, ಪಪಂ ಸದಸ್ಯ ಸಿದ್ದಯ್ಯ. ಕಾಂಗ್ರೆಸ್ ಮುಖಂಡ ಸಾವಜ್ಜಿ ರಾಜೇಂದ್ರ ಪ್ರಸಾದ್ ಇತರರಿದದರು.