

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ನಾಗರಿಕರು ತಮ್ಮ ಸ್ವತ್ತುಗಳಿಗೆ ರಿಯಾಯಿತಿಯೊಂದಿಗೆ ಆಸ್ತಿತೆರಿಗೆ ಪಾವತಿಸಲು ಶನಿವಾರ (ಮೇ 31) ಕಡೆಯ ದಿನವಾಗಿದೆ.
2025-26ನೇ ಸಾಲಿನ ಆಸ್ತಿತೆರಿಗೆ ಪಾವತಿ ವೇಳೆ ಏ.1ರಿಂದ ಎರಡು ತಿಂಗಳು ರಿಯಾಯಿತಿ ನೀಡಲಾಗಿದೆ. ಈ ಗಡುವು ಪೂರ್ಣವಾಗಲಿದ್ದು, ಜೂ.1ರಿಂದ ಈ ಸೌಲಭ್ಯ ಸಿಗದು. ಆದರೂ, ಬಡ್ಡಿ ಹಾಗೂ ದಂಡ ಇಲ್ಲದೆ ಜೂನ್ ತಿಂಗಳಲ್ಲೂ ಟ್ಯಾಕ್ಸ್ ಕಟ್ಟಬಹುದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
2,400 ಕೋಟಿ ರೂ. ತೆರಿಗೆ ವಸೂಲು:
ಪ್ರಸಕ್ತ ಸಾಲಿನ ಮೊದಲ ಎರಡು ತಿಂಗಳ ಅವಧಿಯಲ್ಲಿ ಪಾಲಿಕೆ ಶುಕ್ರವಾರದವರೆಗೆ 2,424.93 ಕೋಟಿ ರೂ. ಮೊತ್ತದ ಆಸ್ತಿತೆರಿಗೆ ಸಂಗ್ರಹಿಸಿದೆ. ಈ ಅವಧಿಯಲ್ಲಿ ಮಹದೇವಪುರ ವಲಯವು ಅತಿ ಹೆಚ್ಚು 598.51 ಕೋಟಿ ರೂ. ಹಾಗೂ ಪೂರ್ವ ವಲಯ 455.06 ಕೋಟಿ ರೂ. ಸಂಗ್ರಹಿಸಿದೆ. ದಾಸರಹಳ್ಳಿ ವಲಯ ಅತಿ ಕಡಿಮೆ 77.17 ಕೋಟಿ ರೂ. ಸಂಗ್ರಹಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸಾಲಿನ ಒಂದು ಬಾರಿ ಇತ್ಯರ್ಥ (ಒಟಿಎಸ್) ಯೋಜನೆ ಜಾರಿಯಲ್ಲಿದ್ದ ಕಾರಣ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಹೆಚ್ಚಿನ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲಿರುವ ಕಾರಣ 5 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿದೆ.
ಆಸ್ತಿತೆರಿಗೆ ಸಂಗ್ರಹ ವಿವರ (ಏ.1ರಿಂದ ಮೇ 30):
ವಲಯದ ಹೆಸರು ಸಂಗ್ರಹ (ಕೋಟಿ ರೂ.ಗಳಲ್ಲಿ)
ಪೂರ್ವ 455.06
ಪಶ್ಚಿಮ 270.36
ದಕ್ಷಿಣ 391.96
ಮಹದೇವಪುರ 598.51
ಬೊಮ್ಮನಹಳ್ಳಿ 258.63
ಆರ್‌ಆರ್‌ನಗರ 175.27
ಯಲಹಂಕ 197.97
ದಾಸರಹಳ್ಳಿ 77.17