26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ 2024ಕಿಚ್ಚ ಸುದೀಪ್ ಮೆರುಗು, ಕಲಾವಿದರಿಗೆ ವಿವಿಧ ಯೋಜನೆ ರಾಮಚಂದ್ರ ಹೆಗಡೆ ಕೊಂಡದಕುಳಿಗೆ ಪ್ರಶಸ್ತಿ

patla
Published on

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಮೇ 26 ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ಸಮಾರಂಭ 2024 ಜರಗಲಿದೆ.


ಬೆಳಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆರ್ಶೀರ್ವಚನ ನೀಡಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆ. ಆರೋಗ್ಯ ಶಿಬಿರವನ್ನು ಡಾ.ರವೀಶ್ ತುಂಗಾ ಉದ್ಘಾಟಿಸುವರು. ರಕ್ತದಾನ ಶಿಬಿರವನ್ನು ಡಾ.ಶ್ರೀಧರ್ ಉದ್ಘಾಟಿಸಲಿದ್ದಾರೆ. ಉಚಿತ ಕಣ್ಣು ಪರೀಕ್ಷೆ, ಕನ್ನಡ ವಿತರಣೆ ನಡೆಯಲಿದೆ.


ಬೆಳಗ್ಗೆ 11 ಗಂಟೆಗೆ ಯುವ ಭಾಗವತರಿಂದ ಗಾನ ವೈಭವ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 3.30 ಕ್ಕೆ ಪಾರಂಪರಿಕ ಯಕ್ಷಗಾನ ಕಿರಾತಾರ್ಜುನ ಪ್ರದರ್ಶನಗೊಳ್ಳಲಿದೆ.
ಸಂಜೆ 5.15 ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ.


ಯಕ್ಷಧ್ರುವ ಪಟ್ಲ ಪ್ರಶಸ್ತಿ
ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರನ್ನು 2024 ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ 1 ಲಕ್ಷ ರೂ. ಗೌರವ ಧನ ಒಳಗೊಂಡಿದೆ. 2024 ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ದಿವಾಕರ್ ರಾವ್ ಮತ್ತು ಶೈಲಾ ದಿವಾಕರ್ ಪಡೆಯಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 18 ಮಂದಿ ಕಲಾ ಗೌರವವನ್ನು ಸ್ವೀಕರಿಸಲಿದ್ದಾರೆ.


2024 ರ ಸೇವಾ ಯೋಜನೆ
ಯಕ್ಷಗಾನ, ನಾಟಕ -ರಂಗಭೂಮಿ, ದೈವಾರಾಧನೆ ಒಟ್ಟು 3,500 ಕಲಾವಿದರಿಗೆ ಅಪಘಾತ ವಿಮಾ ಯೋಜನೆ, 20 ಸಾವಿರ ನಗದಿನೊಂದಿಗೆ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ. ವೈದ್ಯಕೀಯ, ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಆಶಕ್ತರಿಗೆ ಧನಸಹಾಯ, ಗೃಹ ನಿರ್ಮಾಣಕ್ಕೆ ಸಹಾಯ ಧನ, ಸರ್ಕಾರಿ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆ ಸಾಕಾರಗೊಳ್ಳುತ್ತಿದೆ ಎಂದರು.


11.5 ಕೋಟಿ ಮೊತ್ತದ ಸೇವಾ ಯೋಜನೆ ಅನುಷ್ಠಾನ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂಟು ವರ್ಷಗಳಲ್ಲಿ ಸುಮಾರು 11.5 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಯಕ್ಷಧ್ರುವ ಯಕ್ಷ ಶಿಕ್ಷಣ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 3,500 ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬೇರೆ ಬೇರೆ ಆಯಾಮಗಳ ಸ್ಪರ್ಧೆ, ಇದರಲ್ಲಿ 1,700 ವಿದ್ಯಾರ್ಥಿಗಳು ವೇಷಭೂಷಣಗಳೊಂದಿಗೆ ಒಂದೇ ದಿನ ರಂಗ ಪ್ರವೇಶ ಮಾಡಿರುವುದು ಯಕ್ಷಗಾನದಲ್ಲಿ ದಾಖಲೆಯಾಗಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥೆಯೊಂದಿಗೆ ಮಹಿಳಾ ಘಟಕ ಮತ್ತು ವಿದೇಶದಲ್ಲಿರುವ ಘಟಕಗಳು ಸೇರಿದಂತೆ ಒಟ್ಟು 40 ಪ್ರಾದೇಶಿಕ ಘಟಕಗಳು ಕೆಲಸ ಮಾಡುತ್ತಿದೆ.


ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ
ಈ ಬಾರಿ ವೃತ್ತಿಪರ ಕಲಾವಿದರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ ಹಾಗು ವಿಜ್ಞಾನ ಹೀಗೆ ಒಟ್ಟು 4 ವಿಭಾಗಗಳಲ್ಲಿ) ಯಲ್ಲಿ ಶೇ.90 ಕ್ಕಿಂತ ಮೇಲ್ಪಟ್ಟು ಗರಿಷ್ಟ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ 2024ರ ಪಟ್ಲ ಸಂಭ್ರಮದಂದು ನೀಡಲಾಗುವುದು ಎಂದವರು ವಿವರಿಸಿದರು.


ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಅಂ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ , ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಡಾ.ಮನು ರಾವ್, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net