

ಗುರುಪುರ: ವಾಮಂಜೂರಿನ ಶ್ರೀ ಅಮೃತೇಶ್ವರಿ ದೇವಸ್ಥಾನದ ಮುಂಭಾಗ ಮೇ 11,12 ಹಾಗೂ 13ರಂದು ಬೃಹತ್ ಕೃಷಿ ಮೇಳ ಹಾಗೂ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶುಕ್ರವಾರ ಮಂಗಳೂರಿನ ಎಸ್ಸಿಡಿಸಿ ಬ್ಯಾಂಕ್ ಸಭಾಗೃಹದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು.
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕೃಷಿಗೆ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕೃಷಿ ಮೇಳ ನಡೆಸುವುದು ಉತ್ತಮ ಬೆಳವಣಿಗೆ.ಭತ್ತ ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದ ಎಲ್ಲ ಬೆಳೆಗಳು, ಹೈನುಗಾರಿಕೆ, ಆಹಾರ ಮೇಳ ಮತ್ತಿತರ ಕೃಷಿ ಆಯಾಮಗಳಿಗೆ ಆದ್ಯತೆ ನೀಡುವ ಉದ್ದೇಶ ಈ ಮೇಳದಲ್ಲಿ ಅಡಕವಾಗಿದೆ ಎಂದರು.
ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮಾತನಾಡಿ, ಶ್ರೀಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮದೊಂದಿಗೆ ಕೃಷಿ ಮೇಳ ನಡೆಯಲಿದೆ. ಮೇಳದ ಸಂದರ್ಭ ಯಕ್ಷಗಾನ ಆಸ್ವಾದಿಸುವ ಅವಕಾಶವಿದೆ. ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕೃಷಿ ಮೇಳ ನಡೆಯಲಿದೆ ಎಂದರು.
ಮಂಜುನಾಥ ಭಂಡಾರಿ ಶೆಡ್ಡೆ, ಪ್ರತಿಷ್ಠಾನ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಲ್ಯೊಟ್ಟು ಹಾಗೂ ಪ್ರತೋಷ್ ಮಲ್ಲಿ, ಚಿತ್ತರಂಜನ್ದಾಸ್ ಶೆಟ್ಟಿ, ಶರತ್ ಶೆಟ್ಟಿ ಪಡುಪಳ್ಳಿ, ದಿನೇಶ್ ಜೆ. ಕರ್ಕೇರ ಸಾನದಮನೆ ಕೆತ್ತಿಕಲ್, ಸಂತೋಷ್ ಶೆಟ್ಟಿ ಶೆಡ್ಡೆ, ಟಿ.ದಿವಾಕರ ಆಚಾರ್ಯ, ಚಿತ್ತರಂಜನ್ದಾಸ್ ಶೆಟ್ಟಿ, ಗಣೇಶ್ ಭಟ್ ತಂತ್ರಿಬೆಟ್ಟು, ಗುರುಪುರ ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಶೀನ ಕೋಟ್ಯಾನ್, ನಿರ್ದೇಶಕರಾದ ಜಿ.ಎಂ.ಉದಯ ಭಟ್, ಶ್ರೀನಿವಾಸ ಸುವರ್ಣ ಮಲ್ಲೂರು, ನಳಿನಿ ಶೆಟ್ಟಿ, ಲತಾ ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಮತ್ತು ಬೃಹತ್ ಕೃಷಿ ಮೇಳದಲ್ಲಿ ಆಹಾರ ಮೇಳ, ವಾಹನ, ಜಾನುವಾರು, ವ್ಯವಹಾರ, ಕುಕ್ಕುಟ, ಹಲಸು ಮೇಳ, ಶ್ವಾನ ಪ್ರದರ್ಶನ, ಮನೋರಂಜನಾ ಆಟಗಳು, ಜಾನಪದ ಆಟಗಳು, ಸಂಗೀತ ರಸಸಂಜೆ, ತಾರಾಲಯ, ವಸ್ತುಪ್ರದರ್ಶನ, ತಾಲೀಮು ಪ್ರದರ್ಶನ, ಹಗ್ಗ-ಜಗ್ಗಾಟ, ಭಾರ ಎತ್ತುವ ಸ್ಪರ್ಧೆ, ಮಹಿಳೆಯರು ಮತ್ತು ಪುರುಷರಿಗೆ ಕಬಡ್ಡಿ, ಕುಸ್ತಿ ಪಂದ್ಯಾಟ, ಚರ್ಚಾಗೋಷ್ಠಿ, ಕೃಷಿ ಮಾಹಿತಿ, ಕೃಷಿ ವಿಚಾರಗೋಷ್ಠಿ, ಹಣ್ಣುಹಂಪಲು ಉತ್ಸವ, ಗೋ ಉತ್ಪನ್ನಗಳ ಮಳಿಗೆ, ಯಕ್ಷ ಚರ್ಚಾಗೋಷ್ಠಿ, ಫಲಪುಷ್ಪ ಪ್ರದರ್ಶನ, ದೇಹದಾರ್ಢ್ಯ ಪ್ರದರ್ಶನ, ಕಂಬಳ ಕೂಟ, ಪಾರಂಪರಿಕ ಗ್ರಾಮ, ಯಕ್ಷಗಾನ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಸಿ ಗೋ ತಳಿಗಳ ಪ್ರದರ್ಶನ, ಚಲನಚಿತ್ರ ನಟ-ನಟಿಯರ ಸಮಾಗಮ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಸಮಾಗಮ ಗಮನಸೆಳೆಯಲಿದೆ.