ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಿಂದ ಗರಿಷ್ಠ ಅನುದಾನ

Ex cm basavaraj bommai school innogaration
Published on

ಶಿಗ್ಗಾಂವಿ(ಗ್ರಾ): ರಾಜ್ಯ ಸುದೀರ್ಘ ಕಾಲ ಸುಭಿಕ್ಷೆಯಾಗಿರಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಹೀಗಾಗಿ ಬಜೆಟ್​ನಲ್ಲಿ ಶಿಕ್ಷಣಕ್ಕೆ ಶೇ. 13 ಮತ್ತು ಆರೋಗ್ಯಕ್ಕೆ ಶೇ. 12ರಷ್ಟು ಹಣವನ್ನು ನೀಡಿದ್ದೇನೆ. ಇಷ್ಟು ಹಣವನ್ನು ಹಿಂದಿನ ಯಾವ ಸರ್ಕಾರವೂ ನೀಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಮಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿನ ನಂತರ ಅತಿ ಮುಖ್ಯವಾಗಿರುವುದು ಶಾಲಾ ಕೊಠಡಿಗಳು. ಹಲವಾರು ಗ್ರಾಮಗಳಲ್ಲಿ ಇನ್ನೂ ಹೆಂಚಿನ ಮೇಲ್ಛಾವಣೆ ಇರುವ ಶಾಲಾ ಕೊಠಡಿಗಳನ್ನು ನೋಡಿದ್ದೇನೆ. ಹೀಗಾಗಿ ನನ್ನ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಶಾಲಾ ಕೊಠಡಿಗಳಿಗೆ ಅನುಮೋದನೆ ನೀಡಿದ್ದೇನೆ. ವಿವೇಕ ಯೋಜನೆಯಡಿಯಲ್ಲಿ ಪ್ರತಿ ತಾಲೂಕಿನಲ್ಲಿ ಕನಿಷ್ಠ ಮೂವತ್ತರಿಂದ ಐವತ್ತು ಶಾಲಾ ಕೊಠಡಿಗಳನ್ನು ನಮ್ಮ ಸರ್ಕಾರ ಇದ್ದಾಗ ಮಂಜೂರಾತಿ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಎಂಟು ಸಾವಿರ ವಿವೇಕ ಯೋಜನೆಯಡಿ ಮತ್ತು ಬೇರೆ ಬೇರೆ ಯೋಜನೆಗಳು ಸೇರಿ ಒಟ್ಟು 9235 ಶಾಲಾ ಕೊಠಡಿಗಳು ಮಂಜೂರಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಮ್ಮ ಮಕ್ಕಳಿಗೆ ಸುಸಜ್ಜಿತ ಸೂರು ನೀಡಲು ಆಗಿಲ್ಲ. ರಾಜ್ಯ ಉದಯಿಸಿದಾಗಿನಿಂದ ಅಂದರೆ 1956ರಿಂದ ಇಲ್ಲಿಯ ವರೆಗೆ ಪ್ರತಿ ವರ್ಷ ಅತಿ ಹೆಚ್ಚು ಅಂದರೆ 2500ರ ವರೆಗೆ ಶಾಲಾ ಕೊಠಡಿಗಳನ್ನು ನೀಡಿದ್ದಾರೆ. ಆದರೆ, ನಾನು ಕೇವಲ ಒಂದೇ ವರ್ಷದಲ್ಲಿ 8 ಸಾವಿರ ಶಾಲಾ ಕೊಠಡಿಗಳ ನಿರ್ವಣಕ್ಕೆ ಅನುದಾನ ನೀಡಿದ್ದೇನೆ. ಇದರ ಜತೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೇವೆ. ಆ ಎಲ್ಲ ಶಿಕ್ಷಕರು ಬಂದರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗುತ್ತದೆ. ಇದಕ್ಕೂ ಪೂರ್ವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ಆಕಸ್ಮಾತ್ ಕೊರತೆಯಾದಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಶಿಗ್ಗಾಂವಿ ತಾಲೂಕಿಗೆ ಅವಶ್ಯವಿರುವ ಅತಿಥಿ ಶಿಕ್ಷಕರನ್ನು ನೀಡಲಾಗುವುದು. ಈ ಮೊದಲು 2008ರಿಂದ 2010 ವರೆಗೆ ನಮ್ಮ ಟ್ರಸ್ಟ್ ವತಿಯಿಂದ ಅತಿಥಿ ಶಿಕ್ಷಕರನ್ನು ನೀಡಿದ್ದೇನೆ ಎಂದು ಹೇಳಿದರು.

ಬಿಇಒ ಎಂ.ಬಿ. ಅಂಬಿಗೇರ, ತಹಸೀಲ್ದಾರ್ ಸಂತೋಷ ಕುಲಕರ್ಣಿ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಶಿವಾನಂದ ಮ್ಯಾಗೇರಿ, ಎನ್.ಎಂ. ವೆಂಕೋಜಿ, ಹನುಮರೆಡ್ಡಿ ನಡುವಿನಮನಿ, ಎಸ್.ಆರ್. ಪಾಟೀಲ, ತಿಪ್ಪಣ್ಣ ಸಾತನ್ನವರ, ಸೀತಮ್ಮ ಗಾಜಿ, ಅಶೋಕ ಅಕ್ಕಿ, ಕಾಶಿನಾಥ ಕಳ್ಳಿಮನಿ, ರಮೇಶ ಆಲದಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶೌಚಗೃಹ ನಿರ್ವಣಕ್ಕೆ 258 ಕೋಟಿ ಅನುದಾನ

ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಶೌಚಗೃಹಗಳನ್ನು ನಿರ್ಮಾಣ ಮಾಡಲು 258 ಕೋಟಿ ರೂ. ಅನುದಾನ ನೀಡಿದ್ದೇನೆ. ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಯ ಭರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಹಣದ ಕೊರತೆಯಾಗಬಾರದು. ಯಾವದೇ ಕಾರಣಕ್ಕೂ ಮಂಜೂರಾದ ಶಾಲಾ ಕೊಠಡಿಗಳನ್ನು ನಿಲ್ಲಿಸದಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ. ಈಗಾಗಲೇ ಮಡ್ಲಿ ಗ್ರಾಮಕ್ಕೆ ಎರಡು ಕೊಠಡಿ ಮಂಜೂರು ಮಾಡಲಾಗಿದೆ. ಇನ್ನೂ ನಾಲ್ಕು ಕೊಠಡಿಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net