

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿ ಅರಮನೆಯಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಅರಮನೆ ಮಂಡಳಿಯಿಂದ ಶನಿವಾರ ಉಪಾಹಾರ ಕೂಟ ಏರ್ಪಡಿಸಲಾಗಿತ್ತು.
ಆರಮನೆ ಆವರಣದಲ್ಲಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಮಾವುತರು, ಕಾವಾಡಿಗಳಿಗೆ ಊಟ ಬಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಹ ಮಾವುತರೊಂದಿಗೆ ಕುಳಿತು ಉಪಹಾರ ಸೇವಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‌ಸೇಠ್, ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಡಿಸಿ ಪಿ.ಶಿವರಾಜು, ಮುಡಾ ಆಯುಕ್ತ ರಘುನಂದನ್, ಸೆಸ್ಕ್ ಎಂಡಿ ಜಿ.ಶಿಲ್ಪಾ, ಎಸ್ಪಿ ವಿಷ್ಣುವರ್ಧನ್, ಡಿಸಿಪಿಗಳಾದ ಮುತ್ತುರಾಜು, ಜಾಹ್ನವಿ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇತರರು ಇದ್ದರು.
ಹೋಳಿಗೆ, ಇಡ್ಲಿ, ಸಾಂಬಾರ್, ಚಟ್ನಿ, ಉದ್ದಿನವಡೆ, ದೋಸೆ, ಸಾಗು, ಕೇಸರಿಬಾತ್, ಉಪ್ಪಿಟ್ಟು, ಪೊಂಗಲ್ ಬಡಿಸಲಾಯಿತು. ಬಳಿಕ ಸಚಿವ ಮಹದೇವಪ್ಪ ಮಾವುತರು, ಅಧಿಕಾರಿಗಳೊಂದಿಗೆ ಕುಳಿತು ಉಪಹಾರ ಸೇವಿಸಿದರು.
ಆರೋಗ್ಯ ತಪಾಸಣೆ ಶಿಬಿರ:
ಉಪಹಾರ ಕೂಟದ ಜತೆಗೆ ಜೆಎಸ್‌ಎಸ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಚಿವ ಡಾ.ಎಚ್.ಸಿ.ಮಹದೇವಪ್ಪ ಶಿಬಿರ ಉದ್ಘಾಟಿಸಿದರು. ಆಸ್ಪತ್ರೆಯ ನುರಿತ ವೈದ್ಯರು, ಸಿಬ್ಬಂದಿ ದಿನವಿಡೀ ಮಾವುತರು, ಕಾವಾಡಿಗಳು, ಅವರ ಮಕ್ಕಳಿಗೆ ಜ್ವರ, ಬಿಪಿ, ಶುಗರ್, ಮೈಕೈ ನೋವು, ಹಲ್ಲು ನೋವು ಸೇರಿದಂತೆ ವಿವಿಧ ರೀತಿಯ ತಪಾಸಣೆ ನಡೆಸಿದರು.
ತಾತ್ಕಾಲಿಕ ಶಾಲೆ, ಗ್ರಂಥಾಲಯ ಉದ್ಘಾಟನೆ:
ಮಾವುತರು ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಅರಮನೆ ಅಂಗಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶಾಲೆ ಹಾಗೂ ಗ್ರಂಥಾಲಯವನ್ನು ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಿ ಸಮವಸ್ತ್ರ ವಿತರಿಸಿದರು. ಬಳಿಕ ಮಕ್ಕಳು ವಿವಿಧ ವೇಷ ಭೂಷಣ ತೊಟ್ಟು ನೃತ್ಯ ಪ್ರದರ್ಶಿಸಿ ನೋಡುಗರ ಗಮನ ಸೆಳೆದರು.
ಗಲ್ಲು ಗಲ್ಲೆನುತ ಗೆಜ್ಜೆ ಗಲ್ಲುತ್ತಾಜೆನುತ… ಭೂಮಿ ಈ ಭೂಮಿ ಮೇಲಿನಾಡು, ಈ ನಾಡಲೆಮ್ಮ ಕೋಟಿ, ಈ ಕೋಟೆಗೆ ನೀನೆ ನೀನೆ ತಾಯಿ… ಹಾಡಿಗೆ ನೃತ್ಯ ಮಾಡಿದರು. ತಮ್ಮ ಸಂಸ್ಕೃತಿ ಬಿಂಬಿಸುವ ಲೇ ಲಾ ಲಲ್ಲ ಲಾ… ಎಂಬ ಹಾಡಿಗೆ ಹೆಜ್ಜೆ ಹಾಕಿದರು. ಸಚಿವ ಮಹದೇವಪ್ಪ ಅವರೂ ಸಹ ಎರಡು ಹೆಜ್ಜೆ ಹಾಕಿ ಸಂಭ್ರಮಿಸಿದರು. ತನ್ವೀರ್ ಸೇಠ್, ಯತೀಂದ್ರ ಸಿದ್ದರಾಮಯ್ಯ, ಅಯೂಬ್ ಖಾನ್ ಮಕ್ಕಳ ನೃತ್ಯಕ್ಕೆ ಮನಸೋತು ಅವರೊಂದಿಗೆ ಫೋಟೊ ತೆಗೆಸಿಕೊಂಡರು.