ಮಾವಿನಕೆರೆ ವೆಂಕಟರಮಣಸ್ವಾಮಿ ರಥೋತ್ಸವ ಅದ್ದೂರಿ

ಮಾವಿನಕೆರೆ ವೆಂಕಟರಮಣಸ್ವಾಮಿ ರಥೋತ್ಸವ ಅದ್ದೂರಿ
Published on

ಹೊಳೆನರಸೀಪುರ: ಮಾವಿನಕೆರೆ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಬೆಟ್ಟದ ಶ್ರೀರಂಗನಾಥಸ್ವಾಮಿ ದೇಗುಲದಲ್ಲ್ಲಿ ಮಂಗಳವಾರ ಶುಭ ಮುಹೂರ್ತದಲ್ಲಿ ರಥೋತ್ಸವ ವೈಭವದಿಂದ ನೆರವೇರಿತು.

ಮುಂಜಾನೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಅಲಂಕಾರ ಬಳಿಕ ಸೂರ್ಯ ಮಂಡಲೋತ್ಸವ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ದೇವರ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ರಥಬೀದಿಯಲ್ಲಿ ಉತ್ಸವ ನಡೆಸಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಬೆಳಗ್ಗೆ 11.30 ರಿಂದ 12ಕ್ಕೆ ಸಲ್ಲುವ ಪುಷ್ಯ ನಕ್ಷತ್ರದಲ್ಲಿ ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥಬೀದಿಯಲ್ಲಿ ತೇರು ಎಳೆದರು. ಜತೆಗೆ ಭಕ್ತರು ಹಣ್ಣು ಜವನವನ್ನು ರಥಕ್ಕೆ ಎಸೆದು ಭಕ್ತಿಯನ್ನು ಸಮರ್ಪಿಸಿ ಪುನೀತರಾದರು.

ಹಿರಿಯ ಅರ್ಚಕರಾದ ಎಂ.ಎಸ್.ಜನಾರ್ದನ ಭಟ್ಟರ ನೇತೃತ್ವದಲ್ಲಿ ಶ್ರೀನಿವಾಸ್, ಚೇತನ್, ಎಂ.ಜೆ.ಪ್ರಜ್ವಲ್ ಹಾಗೂ ಸಹಾಯಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ಪಟ್ಟಣದ ದೊಡ್ಡಮನೆ ಕುಟುಂಬದವರು ಮತ್ತು ಗೊರೂರು ಅಡ್ಡೋಣಿ ಕುಟುಂಬ ಸದಸ್ಯರು ಬೋಜನದ ವ್ಯವಸ್ಥೆ ಮಾಡಿದ್ದರು.

ಪೂಜಾ ಮಹೋತ್ಸವದಲ್ಲಿ ಹಳೇಕೋಟೆ ಗ್ರಾಪಂ ಅಧ್ಯಕ್ಷ ಸೂರಿ ಕುಮಾರ್, ತಹಸೀಲ್ದಾರ್ ಎಲ್.ಎಸ್.ರಮೇಶ್, ಉಪ ತಹಸೀಲ್ದಾರ್ ಕಿರಣ್, ಡಿವೈಎಸ್‌ಪಿ ಶಾಲು, ವೃತ್ತ ನಿರೀಕ್ಷಕ ಮೋಹನಕೃಷ್ಣ, ಪಿಎಸ್‌ಐಗಳಾದ ಅರುಣ್‌ಕುಮಾರ್, ವಿನಯ್‌ಕುಮಾರ್, ಅಭಿಜಿತ್, ರಮೇಶ್, ರಾಜಸ್ವ ನಿರೀಕ್ಷಕ ಯೋಗಾನಂದ, ಗ್ರಾಮ ಲೆಕ್ಕಾಧಿಕಾರಿಗಳಾದ ಗುರುಮೂರ್ತಿ, ಹರೀಶ್ ಬಣಕರ್, ಜಯರಾಮ್ ಕೆ.ಆರ್., ಹೇಮಾ, ಗ್ರಾಪಂ ಮಾಜಿ ಸದಸ್ಯ ಶೆಟ್ಟಿಗೌಡ, ಗ್ರಾಮದ ಹಿರಿಯರಾದ ಸುಬ್ಬರಾಜು, ಎಂ.ಎನ್.ಜೈಪ್ರಕಾಶ್, ಅಶೋಕ, ಸೀತರಾಮು, ಸೋಮಶೇಖರ, ಮಧು, ವಸಂತಕುಮಾರ್, ರಮೇಶ್, ಚಂದ್ರು, ಚಂದ್ರಶೇಖರ್, ಇತರರು ಭಾಗವಹಿಸಿದ್ದರು.

ಹಳೇಕೋಟೆ ಬೆಟ್ಟದ ಮೇಲಿನ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಕೇಶವಮೂರ್ತಿಗಳ ನೇತೃತ್ವದಲ್ಲಿ ರಂಗನಾಥ ಭಟ್ರು ಹಾಗೂ ಸಹಾಯಕರು ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ ಬಳಿಕ ಪ್ರಾಕಾರೋತ್ಸವ ನಡೆಸಲಾಯಿತು. ಶಾಸಕ ಎಚ್.ಡಿ.ರೇವಣ್ಣ, ವಿ.ಪ.ಸದಸ್ಯ ಡಾ. ಸೂರಜ್ ರೇವಣ್ಣ ಹಾಗೂ ನೂರಾರು ಭಕ್ತರು ದೇವಾಲಯದ ಪ್ರಹಾಂಗಣದಲ್ಲಿ ಜರುಗಿದ ಪ್ರಾಕಾರೋತ್ಸವದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net