

ಬೆಳಗಾವಿ: ತಾಲೂಕಿನ ಮಾವಿನಕಟ್ಟಿ ಗ್ರಾಮದಿಂದ ಗಣಿಕೊಪ್ಪ ಗ್ರಾಮ ಮತ್ತು ಬೆಳಗಾವಿಗೆ ತೆರಳಲು ರಸ್ತೆ ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಸರ್ಕಾರ ಕೂಡಲೇ ರಸ್ತೆ ನಿರ್ಮಿಸಿ ಮಾವಿನಕಟ್ಟಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಜಾವೇದ್ ಮುಲ್ಲಾ ಮಾತನಾಡಿ, ಮಾವಿನಕಟ್ಟಿ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ಗ್ರಾಮದ ಸರಹದ್ದಿನಲ್ಲೇ ಇರುವ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಪರಿಣಾಮ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಸರ್ಕಾರ ಮಾವಿನಕಟ್ಟಿ ಗ್ರಾಮಕ್ಕೆ ಕನಿಷ್ಠ 8 ಅಡಿ ಅಗಲದ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಎರಡು ವರ್ಷದಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ, ಇನ್ನೂ ರಸ್ತೆ ನಿರ್ಮಿಸಲು ಮುಂದಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಮಾವಿನಕಟ್ಟಿ ಗ್ರಾಮಕ್ಕೆ ರಸ್ತೆ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಮಕೃಷ್ಣ ಸನದಿ, ಶಿವಾನಂದ ಪಾಟೀಲ ಸೇರಿ ಹಲವು ಕಾರ್ಯಕರ್ತರು, ಗ್ರಾಮದ ನಿವಾಸಿಗಳು ಪಾಲ್ಗೊಂಡಿದ್ದರು.