

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ ಗಜಪಡೆ, ಮಾವುತರು ಮತ್ತು ಕಾವಾಡಿಗಳೀಗ ಪಾಲಿಸಿದಾರರು!
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗೂ ಗಜಪಡೆಯ ಸೇವಕರಿಗೆ ಜಿಲ್ಲಾಡಳಿತ 1.52 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ಕಲ್ಪಿಸಿದೆ. ಜತೆಗೆ, ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಸಾರ್ವಜನಿಕರಿಗೂ ಪ್ರತ್ಯೇಕವಾಗಿ 50 ಲಕ್ಷ ರೂ. ವಿಮೆ ಸೌಲಭ್ಯವಿದೆ.
ಗಜಪಡೆಯ ತಾಲೀಮು ಅಥವಾ ಮೆರವಣಿಗೆಯ ಸಂದರ್ಭ ಏನಾದರೂ ಅನಾಹುತದಿಂದ ಗಾಯಗೊಂಡರೆ, ಇಲ್ಲವೇ ಸಾರ್ವಜನಿಕರಿಗೆ ಹಾನಿ ಉಂಟು ಮಾಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಅನೇಕ ವರ್ಷಗಳಿಂದ ಈ ಕ್ರಮ ಕೈಗೊಳುತ್ತಿದೆ. ಅಂತೆಯೆ, ಈ ಬಾರಿಯೂ ಅದನ್ನ್ನು ಮುಂದುವರಿಸಿದ್ದು, ಆನೆಗಳು ಮೈಸೂರಿಗೆ ಆಗಮಿಸುವ ದಿನದಿಂದ ಅಕ್ಟೋಬರ್ 30ರವರೆಗೆ ಚಾಲ್ತಿಯಲ್ಲಿರುವಂತೆ ಪಾಲಿಸಿ ಮಾಡಿಸಲಾಗಿದೆ.
ದಿ ನ್ಯೂ ಇಂಡಿಯಾ ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ಒಟ್ಟಾರೆ 2.02 ಕೋಟಿ ರೂ.ಗಳಿಗೆ ವಿಮೆ ಮಾಡಿಸಿದ್ದು, ಅದಕ್ಕಾಗಿ ಜಿಲ್ಲಾಡಳಿತ 56,781 ರೂ. ಪ್ರೀಮಿಯಂ ಪಾವತಿಸಿದೆ. ಈ ಪೈಕಿ ಗಜಪಡೆಯ ಪಾಲು 68 ಲಕ್ಷ ರೂ.ಗಳಾದರೆ, ಸಿಬ್ಬಂದಿ, ಕಾವಾಡಿ ಮತ್ತು ಮಾವುತರದ್ದು 84 ಲಕ್ಷ ರೂ.ಗಳಾಗಿದೆ. ಸಾರ್ವಜನಿಕರಿಗಾಗಿ ಪ್ರತ್ಯೇಕ 5,901 ರೂ. ಪ್ರೀಮಿಯಂ ಪಾವತಿಸಿದೆ.
ಅಂಬಾರಿ ಹೊರುವ ಅರ್ಜುನ ಸೇರಿದಂತೆ ಗಂಡಾನೆಗಳಾದ ಭೀಮ, ಮಹೇಂದ್ರ, ರೋಹಿತ್, ಅರ್ಜುನ, ಸುಗ್ರೀವ, ಧನಂಜಯ, ಕಂಜನ್, ಗೋಪಿ ಹಾಗೂ ಪಾರ್ಥಸಾರಥಿಗೆ ತಲಾ 5 ಲಕ್ಷ ರೂ., ಹೆಣ್ಣಾನೆಗಳಾದ ವರಲಕ್ಷ್ಮೀ, ವಿಜಯಾ, ಹಿರಣ್ಯಾ ಹಾಗೂ ಲಕ್ಷ್ಮೀಗೆ ತಲಾ 4.5 ಲಕ್ಷ ರೂ. ವಿಮೆ ಮಾಡಿಸಲಾಗಿದೆ.
ಆನೆಗಳ ಮಾವುತರು ಮತ್ತು ಕಾವಾಡಿಗಳಾದ ವಸಂತ, ಗುಂಡು, ರಾಜಣ್ಣ, ಮಹದೇವ, ವಿನು, ಹರೀಶ್, ಭಾಸ್ಕರ್, ವಿಜಯ, ನವೀನ್‌ಕುಮಾರ್, ರವಿ ಜೆ.ಕೆ., ಬೋಜಪ್ಪ, ರವಿ, ಚಂದ್ರು, ಜೆ.ಎಸ್.ನಾಗೇಶ್, ರಾಜು, ವೈ.ನಂಜುಂಡಸ್ವಾಮಿ, ಮಲ್ಲಿಕಾ, ಡಿ.ರಾಜು, ಜೆ.ಜಿ.ಶಂಕ್ರ, ಹೇಮಂತ್‌ಕುಮಾರ್, ಜೆ.ಎ.ಮಣಿ, ಜೆ.ಡಿ.ಮಣಿಕಂಠ, ಶಿವರಾಜ್, ಕೆ.ಎಸ್.ಲವ, ಭರತ್, ಮಂಜು, ಜೆ.ಎಸ್.ರಾಜಣ್ಣ, ಮನ್ಸೂರ್, ನಾಗರಾಜ್, ಮಾದೇಶ್, ಎ.ನಾಗೇಶ್, ಎ.ಗಣೇಶ್, ಈರ, ಪೊಣ್ಣಪ್ಪ, ಹರೀಶ, ಜಿ.ಕೆ.ಮರಿ, ರಾಧಾಕೃಷ್ಣ ಅವರಿಗೆ ತಲಾ 2 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗಿದೆ.
ವಿಶೇಷವೆಂದರೆ, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಈ ಬಾರಿ ಪಾಲಿಸಿದಾರರಾಗಿದ್ದಾರೆ. ಡಿಸಿಎಫ್ ಸೌರಭ್‌ಕುಮಾರ್, ಆರ್‌ಎಫ್‌ಒ ಸಂತೋಷ್ ಮನೋಹರ್ ಹೂಗಾರ್, ಪಶುವೈದ್ಯ ಡಾ.ಮಜೀಬ್ ರೆಹಮಾನ್ ಹಾಗೂ ಸಿಬ್ಬಂದಿ ಅಕ್ರಂ ಕೂಡ ಪಾಲಿಸಿದಾರರಾಗಿದ್ದು, ತಲಾ 2 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗಿದೆ.
ವನ್ಯಜೀವಿಗಳ ವಿಷಯವಾಗಿ ದೇಶದಲ್ಲಿ ಕಠಿಣ ಕಾನೂನುಗಳಿವೆ. ಕಾಡಿನಿಂದ ನಾಡಿಗೆ ಪ್ರಾಣಿಗಳನ್ನು ಕರೆತರುವಾಗ ಸೂಕ್ತ ಕ್ರಮ ವಹಿಸಬೇಕು. ಅದರಲ್ಲೂ ಆನೆಗಳನ್ನು ತರುವಾಗ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆನೆಗಳಿಗೆ ಅಥವಾ ಸಾರ್ವಜನಿಕರಿಗೆ ಒಂದೊಮ್ಮೆ ಏನಾದರೂ ತೊಂದರೆಯಾದರೆ ಪರಿಹಾರ ನೀಡಲು ಅರಣ್ಯ ಇಲಾಖೆಯಲ್ಲಿ ಅವಕಾಶವಿಲ್ಲ. ಅದಕ್ಕಾಗಿ ಗಜಪಡೆ, ಗಜಸೇವಕರು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಅವರ ಆಸ್ತಿಗೆ ವಿಮೆ ಮಾಡಿಸಲಾಗುತ್ತದೆ. ಈ ವಿಮೆಯ ಹಣವನ್ನು ಜಿಲ್ಲಾಡಳಿತವೇ ಪಾವತಿಸುತ್ತದೆ. 2004ರಿಂದ ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ ಗಜಪಡೆಗೆ ವಿಮಾ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ವಿಮೆ ಜಂಬೂಸವಾರಿ ಮೆರವಣಿಗೆ ಮುಗಿಸಿ ಮತ್ತೆ ಆನೆಗಳು ಕಾಡು ಸೇರುವವರೆಗೂ ಚಾಲ್ತಿಯಲ್ಲಿರುತ್ತದೆ.
ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ ಜಿಲ್ಲಾಡಳಿತ ಗಜಪಡೆಗೆ ವಿಮೆ ಸೌಲಭ್ಯ ಕಲ್ಪಿಸಿದೆ. ಗಜಪಡೆ ಹಾಗೂ ಗಜಪಡೆಯ ಸೇವಕರಾದ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತ 1.52 ಕೋಟಿ ರೂ. ವಿಮೆ ಕಲ್ಪಿಸಿದೆ. ಜತೆಗೆ, ಸಾರ್ವಜನಿಕರ ಆಸ್ತಿಪಾಸ್ತಿಹಾಗೂ ಸಾರ್ವಜನಿಕರಿಗೂ ವಿಮೆ ಕಲ್ಪಿಸಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ 50 ಲಕ್ಷ ರೂ. ವಿಮೆ ಕಲ್ಪಿಸಿದೆ. ಸೌರಭ್ ಕುಮಾರ್, ಡಿಸಿಎಫ್