ಮಾವಳ್ಳಿ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ

hospital
Published on

ಜಿ.ನಾಗರಾಜ್​ ಬೂದಿಕೋಟೆ

ಬಂಗಾರಪೇಟೆ ತಾಲೂಕು ಮಾವಳ್ಳಿ ಆರೋಗ್ಯ ವಿಸ್ತರಣಾ ಕೇಂದ್ರವು ಸಮಸ್ಯೆಗಳ ಆಗರವಾಗಿದ್ದು, ರೋಗಿಯ ಬದಲಿಗೆ, ಕೇಂದ್ರಕ್ಕೇ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಪಂಚಾಯಿತಿ ವ್ಯಾಪ್ತಿಗಳಲ್ಲಿ ಆರೋಗ್ಯ ಉಪಕೇಂದ್ರ ಹಾಗೂ ಆರೋಗ್ಯ ವಿಸ್ತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳ ಮೂಲಕ ಸಣ್ಣ&ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆಯನ್ನು ಸರ್ಕಾರ ಒದಗಿಸುತ್ತಿದೆ. ಆದರೆ, ಹಲವು ಕಡೆ ಮೂಲ ಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ತಾಲೂಕಿನ ಮಾವಳ್ಳಿ ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ.

ಮಾವಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನರಿಗೆ ಸಮಸ್ಯೆಯಾದರೆ ದೂರದ ಬಂಗಾರಪೇಟೆ ಪಟ್ಟಣಕ್ಕೆ ಅಥವಾ ಕೋಲಾರಕ್ಕೆ ಹೋಗಬೇಕಿತ್ತು. ಅದನ್ನು ಈಗಿಸುವ ಸಲುವಾಗಿ ಮಾವಳ್ಳಿ ಗ್ರಾಮದಲ್ಲಿ ಆರೋಗ್ಯ ವಿಸ್ತರಣಾ ಕೇಂದ್ರ ತೆರೆದು ಒಬ್ಬ ವೈದ್ಯರು, ಒಬ್ಬ ನರ್ಸ್​ ಮತ್ತು ಒಬ್ಬ ಗ್ರೂಪ್​ ಡಿ ನೌಕರರನ್ನು ನಿಯೋಜನೆ ಮಾಡಿ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸುತ್ತಮುತ್ತಲಿನ 7&8 ಗ್ರಾಮಗಳಿಂದ ನಿತ್ಯ 30ಕ್ಕೂ ಹೆಚ್ಚಿನ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ, ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಸಮರ್ಪಕವಾಗಿ ವಿದ್ಯುತ್​ ಸಂಪರ್ಕ ಕಲ್ಪಿಸಿಲ್ಲ. ಬದಲಾಗಿ ವಾಮ ಮಾರ್ಗದಲ್ಲಿ ಸಂಪರ್ಕವನ್ನು ಪಡೆಯಲಾಗಿದೆ. ಇನ್ನು ಆರೋಗ್ಯ ಇಲಾಖೆಯಿಂದ ಕೇಂದ್ರಕ್ಕೆ ಬೇಕಾದ ಔಷಧಗಳನ್ನು ನೇರವಾಗಿ ತಲುಪಿಸುತ್ತಿಲ್ಲ. ಬದಲಾಗಿ ಬೇತಮಂಗಲ ಅಥವಾ ಕಾಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಿಬ್ಬಂದಿ ಹೋಗಿ ತರಬೇಕಾದ ಪರಿಸ್ಥಿತಿ ಇದೆ. ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಪಟ್ಟಿಯೇ ಬೆಳೆಯುತ್ತದೆ.

ಈಗಾಗಲೇ ಹಲವು ಬಾರಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆಯಾದರೂ ಯಾರೂ ಸ್ಪಂದಿಸಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆರೋಗ್ಯ ವಿಸ್ತರಣಾ ಕೇಂದ್ರವನ್ನು ಮೂಲ ಸೌಕರ್ಯಗಳು ಇರುವಂತಹ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸವಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಾಣಭಯದಲ್ಲೇ ನೌಕರರು ಕಾರ್ಯನಿರ್ವಾಹಣೆ

ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಆದ್ದರಿಂದ, ಸರ್ಕಾರಿ ಶಾಲೆಯ ಕಟ್ಟಡವನ್ನು ಆರೋಗ್ಯ ವಿಸ್ತರಣಾ ಕೇಂದ್ರವನ್ನಾಗಿ ಬದಲಾಯಿಸಿಕೊಳ್ಳಲಾಗಿದೆ. ಆದರೆ, ಈ ಕಟ್ಟಡ ಶಿಥಿಲಗೊಂಡಿದ್ದು, ಇಂದೋ ನಾಳೆೆಯೋ ಬೀಳುವ ಹಂತಕ್ಕೆ ತಲುಪಿದೆ. ಇದೇ ಕಟ್ಟಡದಲ್ಲಿ ಕೇಂದ್ರವನ್ನು ನಡೆಸಲಾಗುತ್ತಿದೆಯಾದರೂ ಮಳೆ ಬಂದರೆ ಮೇಲ್ಛಾವಣಿ ಸೋರುವುದರಿಂದ ಕಟ್ಟಡವೆಲ್ಲಾ ಜಲಾವೃತವಾಗುತ್ತದೆ. ಆಗಾಗ ಮೇಲ್ಛಾವಣಿಯ ಸೀಲಿಂಗ್​ ಬೀಲುತ್ತಿದ್ದು, ಪ್ರಾಣಭಯದಲ್ಲಿ ಕೇಂದ್ರದ ಸಿಬ್ಬಂದಿ ಕಾಲ ತಳ್ಳುತ್ತಿದ್ದಾರೆ.

ಶೌಚಗೃಹಕ್ಕೆ ಪರದಾಟ

ಆಸ್ಪತ್ರೆಯ ಸಿಬ್ಬಂದಿ ಅಥವಾ ರೋಗಿಗಳು ಶೌಚಗೃಹ ಬಳಸಲು ಅನಿವಾರ್ಯ ಎದುರಾದರೆ ಕೇಂದ್ರದಲ್ಲಿ ಶೌಚಗೃಹ ಇಲ್ಲದ ಕಾರಣ ಬಯಲಿನಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಪುರುಷರೇನೋ ಬಯಲಿಗೆ ಹೋಗಿ ಬರುತ್ತಾರೆ. ಆದರೆ, ಮಹಿಳೆಯರ ಸ್ಥಿತಿ ಊಹಿಸಲು ಸಾಧ್ಯವಿಲ್ಲ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಅಕ್ಕಪಕ್ಕದ ಮನೆಗಳಿಗೆ ಹೋಗಿ ಶೌಚಗೃಹ ಬಳಸುವ ಅನಿವಾರ್ಯ ಇದೆ. ಕೇಂದ್ರಕ್ಕೆ ನೀರಿನ ಸಂಪರ್ಕವು ಪಂಚಾಯಿತಿಯವರು ಕಲ್ಪಿಸಿಲ್ಲ.

"ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಶೌಚಗೃಹ ಮತ್ತು ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ನೀರು, ಶೌಚಗೃಹ ಸೇರಿ ಇತರೆ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತದೆ."

- ಭಾಸ್ಕರ್​, ಪಿಡಿಒ ಗ್ರಾಪಂ, ಮಾವಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net