ಮೌನೇಶ್ವರ ಜಾತ್ರೋ ಮಹೋತ್ಸವ ಅದ್ದೂರಿ

Balaganuru Mauneshwara jatre
ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪುರವಂತರ ಕುಣಿತ ಸಾರ್ವಜನಿಕರ ಗಮನಸೆಳೆಯಿತು.
Published on

ಮಸ್ಕಿ: ಬಳಗಾನೂರಿನಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವ, ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುರಾಣ ಮಹಾಮಂಗಲ, ಜೋಡುಪಲ್ಲಕ್ಕಿ ಉತ್ಸವ, ಪುರವಂತಿಕೆ ಸೇವಾ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.

ಮದಾನೆಗುಂದಿ ಸಂಸ್ಥಾನ ಸರಸ್ವತಿಪೀಠ ವಿಶ್ವಕರ್ಮ ಜಗದ್ಗುರು ದೇವದುರ್ಗ ಮಠದ ಅಜ್ಜೇಂದ್ರಸ್ವಾಮಿಗಳು ಹಾಗೂ ಉಪ್ಪಾರ ಹೊಸಳ್ಳಿಯ ನಾಗಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.

ಬ್ರಹ್ಮೀ ಮಹೂರ್ತದಲ್ಲಿ ಜೋಡು ಪಲ್ಲಕ್ಕಿ ಉತ್ಸವ, ಪುರವಂತಿಕೆ ಸೇವೆ ಮೌನೇಶ್ವರ ದೇವಸ್ಥಾನದಿಂದ ಆರಂಭವಾಯಿತು. ಉತ್ಸವ ಪಟ್ಟಣದ ವಿವಿಧ ದೇವಸ್ಥಾನಕ್ಕೆ ಬೇಟಿ ನೀಡಿ ಗಂಗಾ ಸ್ಥಳಕ್ಕೆ ತೆರಳಿತು. ಗಂಗಾಸ್ಥಳದಲ್ಲಿ ಮೌನೇಶ್ವರಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಭಕ್ತರು ನೈವೇದ್ಯ, ಮಕ್ಕಳ ತೂಕದಷ್ಟು ಸಕ್ಕರೆ, ಕಾಯಿ ಕರ್ಪೂರಾದಿಗಳನ್ನು ಅರ್ಪಿಸಿ ಭಕ್ತಿ ಮೆರೆದರು. ನಂತರ ಸಾವಿರಾರು ಭಕ್ತರು ಒಂದೇ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಿದರು.

ಉತ್ಸವದಲ್ಲಿ 30 ಕ್ಕೂ ಹೆಚ್ಚು ಜನ ಪುರವಂತರು ಭಾಗವಹಿಸಿದ್ದರು. ಪುರವಂತರು ಅಹೋರಾತ್ರಿ ಡೋಲಿನ ತಾಳಕ್ಕೆ ಲಯಬದ್ಧವಾಗಿ ಕುಣಿದಿದ್ದು ಆಕರ್ಷಕವಾಗಿತ್ತು. ಸರ್ವಧರ್ಮಿಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಶಾಸಕ ಆರ್.ಬಸನಗೌಡ ತುರ್ವಿಹಾಳ ಗಂಗಾಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಾಗಲಿಂಗ ಆಚಾರ್ಯ ಬೇವಿನಾಳ, ಪಪಂ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಮಠಾಧೀಶರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net