ರಾಜಕಾರಣಿಗಳಿಗೆ ಜನಪರ ಕಾಳಜಿ ಇರಲಿ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ

Mauna Chintaka book release mandya
Published on

ಮಂಡ್ಯ: ಭಾರತದಲ್ಲಿ ರಾಜಕಾರಣ ಸಾಮಾನ್ಯ ಜನರಲ್ಲಿ ಹಾಸುಹೊಕ್ಕಿದೆ. ಆದ್ದರಿಂದ, ರಾಜಕಾರಣ ನಿಲ್ಲುವುದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಬಿ.ಬಸವರಾಜ ಅವರ ಅಭಿಮಾನಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು ಅವರಿಗೆ ಅಭಿನಂದನೆ ಮತ್ತು ‘ಮೌನ ಚಿಂತಕ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಯಾರು ಏನು ಬೇಕಾದರೂ ಆಗುತ್ತಾರೋ ಗೊತ್ತಿಲ್ಲ. ಆದರೆ, ರಾಜಕಾರಣಿ ಯಾರೇ ಆಗಲಿ ಜನರ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಬೇಕು. ಹಾಗೆಯೇ ಸಮಾಜ ಸೇವೆಯಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ದಿಸೆಯಲ್ಲಿಯೇ ಬಸವರಾಜು ಅವರು ನಾಯಕತ್ವ ಗುಣ ಬೆಳೆಸಿಕೊಂಡವರು. ರಾಜಕೀಯದ ತಿರುಳು ಅವರಿಗೆ ಇದ್ದರೂ ಜಿ.ಮಾದೇಗೌಡ ಅವರ ಆಶೀರ್ವಾದದಿಂದ ರಾಜಕಾರಣದಲ್ಲಿ ಬೆಳೆಯುವ ಅವಕಾಶ ಸಿಕ್ಕಿತು. ರಾಜಕಾರಣದಲ್ಲಿ ಅದೃಷ್ಟ ಒಲಿದರೆ ಏನು ಬೇಕಾದರೂ ಆಗಬಹುದು. ಮಂಡ್ಯ ಜಿಲ್ಲೆ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದೆ. ದೊಡ್ಡ ಕೃತಿಗಳು ಸ್ನೇಹದ ಬಗ್ಗೆ ಹಲವಾರು ರೀತಿಯ ವ್ಯಾಖ್ಯಾನ ಮಾಡಿವೆ. ಈ ನಿಟ್ಟಿನಲ್ಲಿ ಅನುಭವ ಎನ್ನುವುದು ಬಹಳ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕೃಷಿಯಲ್ಲಿ ಬದಲಾವಣೆ ತರದೆ ಹೋದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೊಸ ಚಿಂತನೆಗಳನ್ನು ಕಂಡುಕೊಳ್ಳಬೇಕಿದೆ. ಮಂಡ್ಯ ಜಿಲ್ಲೆಯ ಜನ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ. ಈ ಬಾರಿ ಮಳೆ ಇಲ್ಲ, ನೀರು ಇಲ್ಲ, ಕೃಷಿ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ನಾವು ದುಃಖದಲ್ಲಿದ್ದೇವೆ. ಇಂತಹ ಸನ್ನಿವೇಶದಲ್ಲಿ ಜಿಲ್ಲೆಯ ಜನ ಜೀವನ ಪ್ರಕ್ರಿಯೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಜಿ.ಮಾದೇಗೌಡ ಅವರು ಬೆಳೆಸಿದ ನಾಯಕತ್ವ ಸಮೂಹದಲ್ಲಿ ಬಿ.ಬಸವರಾಜು ಒಬ್ಬರು. ಮಂಡ್ಯಕ್ಕೆ ಕೃಷಿ ಕಾಲೇಜು ತರುವಲ್ಲಿ ಹಾಗೂ ಫೆರಿಪೆರಲ್ ಕ್ಯಾನ್ಸರ್ ಕೇಂದ್ರ ತರುವಲ್ಲಿಯೂ ಕೆಲಸ ಮಾಡಿದ್ದಾರೆ. ಈ ರೀತಿಯಾಗಿ ಕಾರ್ಯತತ್ಪರತೆ ಇಟ್ಟು ಕೆಲಸ ಮಾಡಿರುವ ಇವರು ಮೌನ ಸಾಧಕರಾಗಿದ್ದಾರೆ ಎಂದು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮೌನ ಚಿಂತಕ ಕೃತಿಯ ಕರ್ತೃ ಎಸ್.ಶಿವರಾಮು ಇತರರಿದ್ದರು. ಇದೇ ವೇಳೆ ಬಿ.ಬಸವರಾಜು ದಂಪತಿಯನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net