ದೇವರಹಿಪ್ಪರಗಿಗೆ ಮೌಲಾನಾ ಆಜಾದ್ ಶಾಲೆ ಮಂಜೂರಿಸಿ, ಜಿಲ್ಲಾಡಳಿತಕ್ಕೆ ಕೆಆರ್‌ಎಸ್ ಪಕ್ಷದಿಂದ ಮನವಿ

KRS PARTY AJAD SCHOOL
ವಿಜಯಪುರ ಜಿಲ್ಲಾಡಳಿತಕ್ಕೆ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಶಿವಾನಂದ ಯಡಹಳ್ಳಿ, ಹಮೀದ್ ಇನಾಮದಾರ, ದುರ್ಗಪ್ಪ ಬೂದಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿಗಾಗಿ ರಾಜ್ಯಾದ್ಯಂತ 200 ಮೌಲಾನಾ ಆಜಾದ್ ಮಾದರಿ ಶಾಲೆ ತೆರೆಯಲಾಗಿತ್ತು. ಅದರಲ್ಲಿ ಒಂದು ಶಾಲೆಯು ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಮಂಜೂರು ಮಾಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷೃತನ ಹಾಗೂ ಚುನಾಯಿತ ಪ್ರತಿನಿಧಿಗಳ ದುರುದ್ದೇಶ ಮತ್ತಿತರ ಕಾರಣಗಳಿಂದ ಮಂಜೂರಾಗಿರುವ ಶಾಲೆಯನ್ನು ರದ್ದುಪಡಿಸಲಾಗಿದೆ. ಇದರಿಂದ ಮತಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

ಮತಕ್ಷೇತ್ರದಲ್ಲಿ ಜೆಡಿಎಸ್ ಚುನಾಯಿತ ಶಾಸಕರು ಇರುವುದರಿಂದಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರುಗಳು ತಾಲೂಕಿಗೆ ಬಂದಿರುವ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಬೇರೆ ಕಡೆಗೆ ಮಂಜೂರಾತಿ ಪಡೆದಿರುವುದನ್ನು ಕೆಆರ್‌ಎಸ್ ಪಕ್ಷ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತಕ್ಷೇತ್ರದಲ್ಲಿ 40 ಸಾವಿರಕ್ಕಿಂತಲೂ ಹೆಚ್ಚು ಅಲ್ಪಸಂಖ್ಯಾತ ಮತದಾರರು ಇದ್ದಾರೆ. ಅದರಲ್ಲೂ ತುಂಬಾ ಬಡತನದ ಜೀವನ ಸಾಗಿಸುವ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು ಅವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಲವಾರು ದಶಕಗಳಿಂದ ವಂಚಿತರಾಗಿದ್ದಾರೆ. ಅಂತಹ ಕುಟುಂಬಗಳ ಮಕ್ಕಳು ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದು ನಾಡಿನ ಮತ್ತು ದೇಶದ ಸಂಪನ್ಮೂಲ ನಾಗರಿಕರಾಗುವುದನ್ನು ತಪ್ಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಈ ಕೂಡಲೇ ರಾಜ್ಯ ಸರ್ಕಾರ ಶಾಲೆಯನ್ನು ಮಂಜೂರು ಮಾಡುವುದರ ಮೂಲಕ ನಮ್ಮ ಭಾಗದ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಹಮೀದ್ ಇನಾಮದಾರ, ದುರ್ಗಪ್ಪ ಬೂದಿಹಾಳ, ಶೀನು ಹಿಪ್ಪರಗಿ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ಸುರೇಂದ್ರ ಕುನಸಲೆ, ಭೀಮಾಶಂಕರ ಕಾಂಬಳೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net