ಸೋರುತ್ತಿದೆ ಮೌಲಾನಾ ಆಜಾದ್ ಶಾಲೆ

school
Published on

ಗಜೇಂದ್ರಗಡ: ಶಾಲೆ ಆರಂಭವಾಗಿ ಐದು ವರ್ಷ ಗತಿಸಿದರೂ ಇನ್ನೂ ಕಾಯಂ ಶಿಕ್ಷಕರ ನೇಮಕವಾಗಿಲ್ಲ. ಪ್ರಭಾರಿ ಮುಖ್ಯ ಶಿಕ್ಷಕರು ಬರೋದೆ ಇಲ್ಲ. ಸೋರುವ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿದ್ದರೂ ಯಾರೊಬ್ಬರೂ ಗಮನ ಹರಿಸಿಲ್ಲ.

ಇದು ಪಟ್ಟಣದ ಮೌಲಾನಾ ಆಜಾದ್ ಇಂಗ್ಲಿಷ್ ಮಾಧ್ಯಮ ಶಾಲೆ ದುಃಸ್ಥಿತಿ.

2018ರಲ್ಲಿ ಆರಂಭವಾದ ಈ ಶಾಲೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ಎಂಸಿಎಸ್ ನಂ. 1 ಶಾಲೆಯ 5 ಕೊಠಡಿಗಳು ಹಾಗೂ ಕಾಲೇಜಿನ 1 ಬಿಲ್ಡಿಂಗನ್ನು ಈ ಶಾಲೆಗೆ ನೀಡಲಾಗಿದೆ. 6ರಿಂದ 10 ನೆ ತರಗತಿಯವರೆಗೆ ಶೇ 75ರಷ್ಟು ಅಲ್ಪಸಂಖ್ಯಾತ ಮಕ್ಕಳು ಸೇರಿ ಒಟ್ಟು 282 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ಮುಂಡರಗಿಯ ಮಂಜುನಾಥ ಚಲವಾದಿ ಎಂಬುವವರು ಪ್ರಭಾರಿ ಮುಖ್ಯ ಶಿಕ್ಷಕರಿದ್ದು, ವಾರಕ್ಕೆ ಮೂರು ಬಾರಿ ಈ ಶಾಲೆಗೆ ಬರಬೇಕು ಎಂಬ ನಿಯಮವಿದೆ. ಆದರೂ ಅವರು ಬರುವುದೇ ಇಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಅಲ್ಪಸಂಖ್ಯಾತ ಮಕ್ಕಳು ಇಂಗ್ಲಿಷ್ ಮಾಧ್ಯಮದಿಂದ ದೂರ ಉಳಿಯಬಾರದೆಂಬ ಉದ್ದೇಶದಿಂದ 2018 ರಲ್ಲಿ ರಾಜ್ಯದಲ್ಲಿ ಮೌಲಾನಾ ಆಜಾದ್ ಶಾಲೆಗಳು ಪ್ರಾರಂಭಗೊಂಡವು. ಆದರೆ, ಗಜೇಂದ್ರಗಡದ ಶಾಲೆಗೆ ಇನ್ನೂ ಸಮರ್ಪಕವಾಗಿ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ.

ಜೀವ ಭಯದಲ್ಲಿ ಮಕ್ಕಳು

ಶಾಲೆಯ 5 ಕೊಠಡಿಗಳ ಪೈಕಿ 2 ಕೊಠಡಿಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಸೋರುತ್ತವೆ. ಮಕ್ಕಳು ಕೂಡ ಜೀವ ಭಯದಲ್ಲಿ ಪಾಠ ಕೇಳುವಂತಾಗಿದೆ. ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದ ಕಾರಣ ಮಕ್ಕಳಲ್ಲಿ ಕ್ರೀಡಾಸಕ್ತಿ ಕುಂದುತ್ತಿದೆ. ಅಲ್ಲದೆ, ಶಾಲೆಯ ಮಕ್ಕಳು ಹಾಲು ಕುಡಿಯಲು ಹಾಗೂ ಊಟ ಮಾಡಲು ಪಕ್ಕದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಹೋಗಬೇಕು. ಹೀಗಾಗಿ ಸಂಬಂದಪಟ್ಟವರು ಸೂಕ್ತ ಕ್ರಮ ಕೈಗೊಂಡು ಶಾಲೆಗೆ ಪ್ರತ್ಯೇಕ ಕಟ್ಟಡ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ.

ಗಜೇಂದ್ರಗಡ ಕುಷ್ಟಗಿ ರಸ್ತೆಯ ಜೀರೆಯವರ ಪ್ಲಾಟಿನಲ್ಲಿ 25 ಗುಂಟೆ ಜಾಗವನ್ನು ಶಾಲೆಗೆ ನೀಡಲು ಪುರಸಭೆ ಠರಾವು ಮಾಡಿತ್ತು. ಈಗ ಕೇಳಿದರೆ ಇನ್ನೊಮ್ಮೆ ಠರಾವು ಆಗಬೇಕು ಎನ್ನುತ್ತಿದ್ದಾರೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಶಾಲೆಯ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.ಶರಣಪ್ಪ ಗೊರೇಬಾಳ, ಅಲ್ಪಸಂಖ್ಯಾತರ ಇಲಾಖೆ ತಾಲೂಕಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net