

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಒಂದೆಡೆ ಮೌಲಾನಾ ಆಝಾದ್ ಮಾದರಿ(ಆಂಗ್ಲಮಾಧ್ಯಮ) ಶಾಲೆ ಸೋಮವಾರದಿಂದ ಆರಂಭಗೊಳ್ಳಲಿದೆ ಎನ್ನುವ ಸಂದೇಶ ಮಕ್ಕಳ ಪಾಲಕರಿಗೆ ಬಂದರೆ, ಮತ್ತೊಂದೆಡೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಶಾಲೆಯತ್ತ ದೌಡಾಯಿಸಿದ್ದಾರೆ. ಈ ಮೂಲಕ ಜೂನ್ 9ರ ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿಯಿಂದ ಇಲಾಖೆ, ಜನಪ್ರತಿನಿಧಿಗಳು ತಕ್ಷಣಕ್ಕೆ ಎಚ್ಚೆತ್ತುಕೊಳ್ಳುವಂತಾಗಿದೆ.
ಮೌಲಾನಾ ಆಝಾದ್ ಮಾದರಿ(ಆಂಗ್ಲ ಮಾಧ್ಯಮ) ಶಾಲಾ ಕಟ್ಟಡ ಕಾಮಗಾರಿ ಬೋಳಿಯಾರ್ ಗ್ರಾಮದ ಜಾರದಗುಡ್ಡ ಮಸೀದಿ ಅಧೀನದಲ್ಲಿದ್ದ ಜಮೀನಿನಲ್ಲಿ ಆರಂಭಗೊಂಡು ನಾಲ್ಕು ವರ್ಷಗಳೇ ಕಳೆದಿವೆ. 2024-25ನೇ ಸಾಲಿನಿಂದ ಆರನೇ ತರಗತಿಗೆ ಪ್ರವೇಶ ಆರಂಭಿಸಲಾಗಿದ್ದು ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸನಿಹದಲ್ಲೇ ಇರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ತರಗತಿ ನಡೆಸಲಾಗಿತ್ತು. 2025-26ನೇ ಶೈಕ್ಷಣಿಕ ಸಾಲಿನಲ್ಲಿ 6ರಿಂದ 8ನೇ ತರಗತಿವರೆಗೆ ಪ್ರವೇಶಾತಿಗಾಗಿ ಇಲಾಖೆಯಿಂದ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಿದ್ದರಿಂದ ಈಗಾಗಲೇ 75 ಮಕ್ಕಳು ದಾಖಲಾತಿ ಪಡೆದಿದ್ದು ಈ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಆದರೆ ತರಗತಿ ನಡೆಸಲು ವ್ಯವಸ್ಥೆ ಇಲ್ಲ ಎನ್ನುವ ನೆಪದಲ್ಲಿ ಮಕ್ಕಳಿಗೆ ರಜೆ ನೀಡಲಾಗಿತ್ತು.
ಸರ್ಕಾರಿ ಶಾಲೆ ಸೋರುತ್ತಿದೆ ಎಂದವರಾರು?
ಕಳೆದ ವರ್ಷ ಸರ್ಕಾರಿ ಶಾಲೆಯ ಆರ್‌ಸಿಸಿ ಕಟ್ಟಡದಲ್ಲಿ ಒಂದು ತರಗತಿ ನಡೆಸಲಾಗಿದೆ. ಈ ಶಾಲೆಯಲ್ಲಿ ಸದ್ಯಕ್ಕೆ 1ರಿಂದ 5ನೇ ತರಗತಿವರೆಗೆ 29 ಮಕ್ಕಳಿದ್ದಾರೆ. ಶಾಲಾ ಕಟ್ಟಡ ಹೆಂಚಿನಿಂದ ಮಾಡಿದ್ದು ಸೋರುವುದರಿಂದ ತರಗತಿ ನಡೆಸಲು ಅಸಾಧ್ಯವಾಗಿದ್ದರಿಂದ ವ್ಯವಸ್ಥೆ ಆಗುವವರೆಗೆ 15 ದಿನ ರಜೆ ನೀಡಲಾಗಿದೆ ಎನ್ನಲಾಗಿತ್ತು.
ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆಗೆ ದೌಡಾಯಿಸಿದ್ದಾರೆ. ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಕೂಡಾ ಧಾವಿಸಿದ್ದಾರೆ. ಈ ಸಂದರ್ಭ ಜೋರಾಗಿ ಮಳೆ ಬಂದಿದ್ದು, ಸರ್ಕಾರಿ ಶಾಲೆಯಲ್ಲಿ ಎಲ್ಲೂ ಸೋರಿಕೆ ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ನೂತನ ಕಟ್ಟಡದಲ್ಲಿ ವ್ಯವಸ್ಥೆ ಆಗುವವರೆಗೆ ಸರ್ಕಾರಿ ಶಾಲಾ ಕಟ್ಟಡದಲ್ಲೇ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ವಿಜಯವಾಣಿ ವರದಿಗೆ ತಕ್ಷಣದ ಸ್ಪಂದನೆ ಸಿಕ್ಕಿದ್ದು ಮಕ್ಕಳ ಪಾಲಕರು ವರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಬ್ಬಾರ್ ಬೋಳಿಯಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಕೂರು, ಸದಸ್ಯ ಅಬೂಬಕ್ಕರ್ ಸಿದ್ದೀಕ್, ಪಾಲಕರಾದ ಅಹ್ಮದ್ ಬಾವ, ಮಹಮ್ಮದ್ ರಫೀಕ್, ಅಬ್ದುಲ್ ಫಾರಿಸ್, ಸ್ಥಳೀಯರಾದ ಹನೀಫ್, ಅಬೂಬಕ್ಕರ್ ಪೊಡಿಯ, ಮಹಮ್ಮದ್, ಸಿಆರ್‌ಪಿಗಳಾದ ಮೋಹನ್, ಗೀತಾ ಶೆಟ್ಟಿ, ಬಿಐಇಆರ್‌ಟಿ ಕಿಶೋರಿ, ಸಮನ್ವಯಾಧಿಕಾರಿ ಸುಷ್ಮಾ ಕಿಣಿ, ಮೌಲಾನಾ ಆಝಾದ್ ಮಾದರಿ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತ ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.
ಅಡುಗೆ ವ್ಯವಸ್ಥೆ ಹೇಗೆ?
ಸರ್ಕಾರಿ ಶಾಲೆಯಲ್ಲಿ ತರಗತಿ ನಡೆಸಿದರೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಕಷ್ಟವಾಗಲಿದೆ. ನಮ್ಮಲ್ಲಿ 29 ಮಕ್ಕಳು ಮಾತ್ರ ಇದ್ದು ಮೌಲಾನ ಆಝಾದ್ ಶಾಲೆಯ ಮಕ್ಕಳನ್ನು ಸೇರಿಸಿ 100 ಮಕ್ಕಳಿಗೆ ಊಟದ ವ್ಯವಸ್ಥೆ ಇಬ್ಬರು ಅಡುಗೆ ಸಿಬ್ಬಂದಿಯಿಂದ ಮಾಡಲು ಅಸಾಧ್ಯ. ಅಲ್ಲದೆ ಅಡುಗೆ ಕೋಣೆಯೂ ಸಣ್ಣದು ಎಂದು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ವೃಂದಾವತಿ ಎಂ. ತಿಳಿಸಿದರು. ಇದುವರೆಗೆ ಎಲ್ಲ ಮೌಲಾನಾ ಆಝಾದ್ ಶಾಲೆಗಳನ್ನು ಆರಂಭಿಸಲಾಗಿದ್ದ ಸರ್ಕಾರಿ ಶಾಲೆಗಳಲ್ಲೇ ನಿರ್ವಹಣೆ ಮಾಡಲಾಗಿದೆ. ಸಮವಸ್ತ್ರ, ಬೆಂಚು, ಡೆಸ್ಕ್, ಎಲ್ಲಾ ವ್ಯವಸ್ಥೆ ಇದೆ. ಆದರೆ ಕಟ್ಟಡದ ಕೊರತೆ ಇದ್ದು ಯಾರೋ ಮಾಡಿದ ತಪ್ಪಿಗೆ ನಾವು ಹೊಣೆ ಹೊರಬೇಕಿದೆ. ನಾವು ಅಡುಗೆಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಮಂಜುನಾಥ್ ಹೇಳಿದರು.
ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ನೆಲೆಯಲ್ಲಿ ಮೌಲಾನಾ ಆಝಾದ್ ಶಾಲೆಗೆ ಸೇರಿಸಿದ್ದೆವು. ಕಳೆದ ವರ್ಷ ಒಂದು ತರಗತಿ ನಡೆಸಲಾಗಿದ್ದು ಈ ವರ್ಷ ಕಟ್ಟಡ ಆಗದಿದ್ದರೂ ಪ್ರಚಾರ ಮಾಡಿ ಮೂರು ತರಗತಿಗಳಿಗೆ ಪ್ರವೇಶ ಪಡೆದು ಶಾಲೆಗೆ ರಜೆ ನೀಡಲಾಗಿತ್ತು. ವಿಜಯವಾಣಿ ವರದಿಯ ಬಳಿಕ ಮತ್ತೆ ತರಗತಿ ಆರಂಭಿಸಲಾಗಿದ್ದು ಸಂತಸ ತಂದಿದೆ. ಅಬ್ದುಲ್ ಸಮೀರ್, ವಿದ್ಯಾರ್ಥಿಯೊಬ್ಬರ ಪಾಲಕ https://www.vijayavani.net/brand-mangalore-award-3 https://www.vijayavani.net/kannada-culture-bhavan