ಅಧ್ಯಯನ ಶಿಬಿರಗಳಿಂದ ಪರಿಪಕ್ವತೆ ಸಾಧ್ಯ

08kkr1(5-25 baratipura sibira (2)
Published on

 ಕಿಕ್ಕೇರಿ: ವಿದ್ಯಾರ್ಥಿ ದಿಸೆಯಲ್ಲಿ ಜರುಗುವ ಅಧ್ಯಯನ ಶಿಬಿರಗಳು ಎಲ್ಲ ರೀತಿಯಲ್ಲೂ ಪರಿಪಕ್ವತೆ ಹೊಂದಲು ಸಾಧ್ಯವಾಗಲಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಸಮೀಪದ ಭಾರತೀಪುರ ಗ್ರಾಮದಲ್ಲಿ ಸ್ನಾತಕೋತ್ತರ ಸಾಮಾಜಿಕ ಕಾರ್ಯವಿಭಾಗದಿಂದ ಬುಧವಾರ ಏರ್ಪಡಿಸಲಾಗಿದ್ದ ಆರ್ಥಿಕ, ಸಾಮಾಜಿಕ ಗ್ರಾಮೀಣ ಅಧ್ಯಯನ ಸಮೀಕ್ಷೆ ಶಿಬಿರದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಶಿಬಿರದಿಂದ ವಿದ್ಯಾರ್ಥಿಗಳಿಗೆ ನೇರವಾಗಿ ಗ್ರಾಮೀಣ ಜನರ ಬದುಕು ಬವಣೆ ಅರ್ಥವಾಗಲಿದೆ. ಜತೆಗೆ ಗ್ರಾಮೀಣ ಜನರಿಗೆ ತಮ್ಮ ಬದುಕನ್ನು ಮಕ್ಕಳಿಗೆ ತಿಳಿಸಲು ಮುಖ್ಯ ವೇದಿಕೆಯಾಗಲಿದೆ. ಶಿಬಿರದಲ್ಲಿ ವಿಶೇಷವಾಗಿ ರೈತರು ಬಳಸುವ ನೇಗಿಲು, ನೊಗ, ರಾಗಿಕಲ್ಲುಗಳಂತಹ ವಸ್ತುಗಳು ಮುಂದಿನ ಪೀಳಿಗೆಗೆ ರೈತನ ಶ್ರಮಿಕ ಬದುಕು ಅರ್ಥವಾಗಲಿದೆ. ರೈತ, ಯೋಧ ನಮ್ಮ ದೇಶದ ಆಸ್ತಿಯಾಗಿದ್ದು, ಅವರನ್ನು ಗೌರವಿಸುವ ಕೆಲಸವಾಗಬೇಕಿದೆ ಎಂದರು.

ಪ್ರತಿಯೊಬ್ಬರೂ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಭದ್ರತೆ ಮುಖ್ಯ. ನಾಗರಿಕರು ತಮ್ಮ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಯುವಾಗ ಮರೆಮಾಚದೆ ವಾಸ್ತವತೆ ಚಿತ್ರಣ ನೀಡಿ. ತಮ್ಮ ಸಾಮಾಜಿಕ, ಕೌಟುಂಬಿಕ ಭದ್ರತೆಗೆ ಸಹಕಾರಿಯಾಗಲಿದೆ. ಸುಳ್ಳು ಮಾಹಿತಿ ಹಲವು ವೇಳೆ ಸಮಸ್ಯೆಗೆ ಸಿಲುಕಿಸಲಿದೆ ಎಂಬ ಅರಿವು ಇರಲಿ ಎಂದು ನುಡಿದರು.

ವಿದ್ಯಾರ್ಥಿಗಳು ಕ್ಷಣಿಕ ಸುಖ ನೀಡಿ ಬದುಕು ಹಾಳುಮಾಡುವ ಮೊಬೈಲ್, ಟಿವಿಯಿಂದ ದೂರವಿರಿ. ಒಳ್ಳೆಯ ಹವ್ಯಾಸವಾಗಿ ಪುಸ್ತಕ, ಪತ್ರಿಕೆ ಓದಿದರೆ ಜ್ಞಾನದೀಪ ಬೆಳಗಿ ಬದುಕಿಗೆ ದಾರಿ ತೋರಿಸಲಿದೆ. ಸಂಸ್ಕಾರ, ಸನ್ನಡತೆ ಬದುಕಿಗೆ ಆಸರೆಯಾಗಲಿದೆ. ಹುಟ್ಟಿದ ಊರು, ತಂದೆ ತಾಯಿಗೆ ಗೌರವ ತರುವಂತಹ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಪುಟ್ಟಣ್ಣ, ಜನಾರ್ದನ್, ಶಿಕ್ಷಕ ಯೋಗೇಶ್, ಉಪನ್ಯಾಸಕರಾದ ರಿಯಾಜ್ ಅಹಮದ್, ನಾಗರಾಜ್, ಹರೀಶ್, ಪುನೀತ್, ಅನಿತಾ, ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net