

ಸಿಂಧನೂರು: ಮಾಟೂರು ಗ್ರಾಮದಲ್ಲಿ ಚರಂಡಿಗಳಿಂದ ದುರ್ನಾತ ಬೀರುತ್ತಿದ್ದು, ಜನತೆ ಅನಾರೋಗ್ಯದ ಭೀತಿ ಎದುರಿಸುತ್ತಿದ್ದಾರೆ.
ತ್ಯಾಜ್ಯ ಸರಾಗವಾಗಿ ಹರಿಯುವಂತೆ ರಸ್ತೆ ಬದಿ ಚರಂಡಿ ನಿರ್ಮಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಬೇಕೆಂದು ಕಳೆದ ವರ್ಷದಿಂದ ಬಪ್ಪೂರು ಗ್ರಾಪಂಗೆ ಗ್ರಾಮಸ್ಥರು ಮಾಡಿದ ಮನವಿಗೆ ಬೆಲೆ ಇಲ್ಲದಂತಾಗಿದೆ. ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದಾಗಿ ಜನರು ತ್ಯಾಜ್ಯದಲ್ಲೇ ಕಾಲಿಟ್ಟು ಮುಂದೆ ಸಾಗುವಂಥ ಪರಿಸ್ಥಿತಿ ಇದೆ.
ಗ್ರಾಪಂನಿಂದ ಸ್ವಚ್ಛತಾ ಕಾರ್ಯ ಕೈಗೊಂಡು ಅನೇಕ ದಿನಗಳಾಗಿವೆ. ವಿವಿಧೆಡೆಯ ತ್ಯಾಜ್ಯ ಮಡುಗಟ್ಟಿರುವುದರಿಂದ ಇಡೀ ಪ್ರದೇಶ ದುರ್ನಾತಮಯವಾಗಿದೆ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ. ಡೆಂಘೆ ಸೇರಿದಂತೆ ಇತರ ಕಾಯಿಲೆಗಳು ಹರಡುತ್ತಿದ್ದು ಸ್ಥಳೀಯರಲ್ಲಿ ರೋಗಭೀತಿ ಆವರಿಸಿದೆ.
ಕಳೆದ ಒಂದು ವಾರದಿಂದ ಮಳೆ ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುವ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಹಲವರು ಜ್ವರದಿಂದ ಬಳಲುತ್ತಿದ್ದು, ಸಿಂಧನೂರು, ತುರ್ವಿಹಾಳ ಸೇರಿ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಡೆಂಘೆ ಭೀತಿಯಿಂದ ಜನರು ಕುಗ್ಗಿ ಹೋಗಿದ್ದಾರೆ.
ಗ್ರಾಪಂ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ರಸ್ತೆಯಲ್ಲಿ ತ್ಯಾಜ್ಯ ಮಡುಗಟ್ಟದಂತೆ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.