

ಬೆಳಗಾವಿ: ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆಯಿಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿಯಿಂದಾಗಿ ರೈತ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಬಿ. ಆರ್. ಪಾಟೀಲ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಬೀಜ ಮೇ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆಯಿಂದ ರೈತನು ಉತ್ತಮ ಇಳುವರಿ ಹಾಗೂ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಮುಂಗಾರು ಹಂಗಾಮು ಸದ್ಯದಲ್ಲೆ ಪ್ರಾರಂಭವಾಗಲಿದ್ದು ಗುಣಮಟ್ಟ ಬೀಜ ರೈತರಿಗೆ ದೊರೆಯುವಂತೆ ಮಾಡುವುದೇ ಕೆವಿಕೆಯ ಬೀಜ ಮೇಳದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಂಚೂಣಿಯಲ್ಲಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸಿದ ಸೋಯಾಬಿನ್ ಬೆಳೆಯ ಕೆಡಿಎಸ್-726 ಮತ್ತು ಕೆಡಿಎಸ್-753 ತಳಿ, ಹೆಸರು ಬೆಳೆಯ ಡಿಜಿಜಿವಿ-2 ತಳಿ, ಶೇಂಗಾ ಬೆಳೆಯ ಟಿಜಿ-39 ತಳಿ, ಉದ್ದು ಬೆಳೆಯ-ಡಿಬಿಜಿವಿ-5 ತಳಿ ಹಾಗೂ ಈರುಳ್ಳಿ ಬೆಳೆಯ ಭೀಮಾ ಸೂಪರ್ ತಳಿಯನ್ನು ರೈತರಿಗೆ ಪೂರೈಸಲು ಬೀಜ ಮೇಳವನ್ನು ಆಯೋಜಿಸಿದೆ. ಆದ್ದರಿಂದ ರೈತರು ಈ ಕಾರ್ಯಕ್ರಮ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್‌ಅಧಿಕಾರಿ ಡಾ. ಮಲ್ಲಿಕಾರ್ಜುನ ಬಿ. ಹಂಜಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಬೀಜ ಮೇಳವನ್ನು ಆಯೋಜಿಸಿರುವುದು ಸಂತೋಷ. ಕೃಷಿಯಲ್ಲಿ ಬೀಜ ಮಹತ್ವವಾದ ಪರಿಕರವಾಗಿದ್ದು ಶರಣರಾದ ಅಲ್ಲಮಪ್ರಭುಗಳು ಬಿತ್ತನೆ ಬೀಜದ ಮಹತ್ವ ಕುರಿತು ಸಾಹಿತ್ಯದಲ್ಲಿ ವಿವರಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರವು ಭಾರತ ಸರ್ಕಾರದ ಅನುದಾನದಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೀಜ ಪೂರೈಕೆ ಹಾಗೂ ಅನೇಕ ತಂತ್ರಜ್ಞಾನದ ವರ್ಗಾವಣೆಯಿಂದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪ ತೋಟಗಾರಿಕಾ ನಿರ್ದೇಶಕ ಮಹಾಂತೇಶ ಮುರಗೋಡ ಮಾತನಾಡಿ, ಕೃಷಿಯಲ್ಲಿ ಆಹಾರ ಧಾನ್ಯದ ಬೆಳೆಯ ಜೊತೆಗೆ ಹಣ್ಣಿನ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಲು ಸಲಹೆ ನೀಡಿದರು.
ಧಾರವಾಡದ ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ ಸಹಾಯಕ ನಿರ್ದೇಶಕ ಟಿ. ಶಿವರುದ್ರಪ್ಪ, ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ,ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ರೈತರು ಇತರರಿದ್ದರು.