

ಮಡಿಕೇರಿ:
ಅಧ್ಯಯನ ಉಸಿರಾಗಿ ಆಳವಾದ ಮತ್ತು ವಿಸ್ತೃತವಾದ ಓದನ್ನು ಮೈಗೂಡಿಸಿಕೊಂಡು ಹೆಚ್ಚಿನ ಕಾಲ ಮನದಲ್ಲಿ ಉಳಿಯುವ ಕೃತಿ ರಚನೆಯತ್ತ ಲೇಖಕರು ಗಮನ ಹರಿಸಿಬೇಕೆಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕ, ಸಾಹಿತಿ ಸುಬ್ರಾಯ ಸಂಪಾಜೆ ಹೇಳಿದರು. ಈಚೆಗೆ ನಡೆದ ಮಡಿಕೇರಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕಿ ಕೆ. ಜಯಲಕ್ಷಿö್ಮÃ ಅವರ 'ಮತ್ತೆ ವಸಂತ' ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯ ವಿಶೇಷತೆಗಳನ್ನು ಸೋದಾಹರಣವಾಗಿ ವಿವರಿಸಿದ ಸುಬ್ರಾಯಸಂಪಾಜೆ ಕನ್ನಡವನ್ನು ಕೊಡಗಿನ ನೆಲದಲ್ಲಿ ಈ ಹಿಂದೆ ಶ್ರೀಮಂತಗೊಳಿಸಿದ ಹಿರಿಯರನ್ನು ನೆನಪಿಸಿಕೊಂಡರು. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ ಕೃತಿರಚನೆಯ ಕೆಲಸ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದರೂ ಅವರಲ್ಲಿ ಕೊಡಗಿನವರು ಯಾರೂ ಇಲ್ಲ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಬರಹಗಾರರು ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊಸ ಹೊಸ ಯೋಜನೆಗಳೊಂದಿಗೆ ಕೃತಿಕಾರರಿಗೆ ಒತ್ತಾಸೆಯಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಪರಿಣಿತರಾದ ಸಂಪನ್ಮೂಲ ವ್ಯಕ್ತಿಗಳಿಂದ ಉದಯೋನ್ಮಖ ಬರಹಗಾರರಿಗೆ ಪರಿಷತ್ತು ತರಬೇತಿ ನೀಡಲಿದೆ ಎಂದರು.
ಬೆಳ್ತಂಗಡಿಯ ಜಯಶಂಕರ ಶರ್ಮ, ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ಹೆಚ್.ಟಿ. ಅನಿಲ್ ಪುಸ್ತಕ ಪರಿಚಯಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಲೇಖಕಿ ಕೆ. ಜಯಲಕ್ಷಿö್ಮÃ, ಬರಹಗಾರ್ತಿ ಪ್ರತಿಮಾಹರೀಶ್, ಗಾಯತ್ರಿ, ಚಿತ್ರ ಆರ್ಯನ್ ಇದ್ದರು.
ಮಕ್ಕಳಿಂದ ನೃತ್ಯ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು, ಬಾಳೆಲೆಯ ಯುವ ಗಾಯಕ ಅನ್ವಿತ್ ಕುಮಾರ್ ಸುಗಮ ಸಂಗೀತದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.