

ಮಡಿಕೇರಿ:
ಕುಶಾಲನಗರ ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿನ ಕಾವೇರಿ ನದಿಯ 2 ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಸರ್ಕಾರ ಮತ್ಸö್ಯಧಾಮವನ್ನಾಗಿ ಘೋಷಣೆ ಮಾಡಿದೆ. ಪಶ್ಚಿಮಘಟ್ಟದ ಅಪರೂಪದ ಮಹಶೀರ್ ಮೀನು ತಳಿ ಸಂರಕ್ಷಣೆ ನಿಟ್ಟಿನಲ್ಲಿ ಈ ಘೋಷಣೆ ಮಹತ್ವದ್ದಾಗಿದ್ದು, ಈ ಭಾಗದಲ್ಲಿ ಎಲ್ಲಾ ರೀತಿಯ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧವನ್ನು ಉಲ್ಲಂಘಿಸಿದರೆ ಅಂಥವರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಅಂತಾರಾಷ್ಟಿçÃಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (ಐಯುಸಿಎನ್) ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿಯಲ್ಲಿ ಅಪರೂಪದ ಮಹಶೀರ್ ಮೀನುಗಳು ಕೂಡ ಸ್ಥಾನ ಪಡೆದುಕೊಂಡಿವೆ. ಕರ್ನಾಟಕದಲ್ಲಿ ಕಾವೇರಿ, ತುಂಗಾ, ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ತಳಿಯ ಈ ಮಹಶೀರ್ ಮೀನುಗಳಿಗೆ 'ಟೈಗರ್ ಆಫ್ ವಾಟರ್' ಎನ್ನುವ ಹೆಸರೂ ಇದೆ. ಈ ಮೀನನ್ನು ದೇವರ ಮೀನು ಎಂದು ಕೂಡ ಕರೆಯುತ್ತಾರೆ. ವಿಷ್ಣು ಮತ್ಸಾö್ಯವತಾರ ಎತ್ತಿದಾಗ ಮಹಶೀರ್ ಮೀನಿನ ರೂಪದಲ್ಲಿದ್ದ ಎನ್ನುವ ಪೌರಾಣಿಕ ಕತೆಗಳೂ ಇದೆ. ವೈಜ್ಞಾನಿಕವಾಗಿ ಕಾರ್ಪ್ ಅಥವಾ ಮಿನ್ನೋ ಎಂದು ಕರೆಯಲಾಗುವ ವೈವಿಧ್ಯಮಯ ಮತ್ತು ದೊಡ್ಡದಾದ ಸಿಪ್ರಿನಿಡೆ ಕುಟುಂಬಕ್ಕೆ ಈ ಮೀನು ಸೇರಿದೆ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ, ಚೀನಾ. ವಿಯೆಟ್ನಾಂ ದೇಶಗಳ ನದಿಗಳಲ್ಲೂ ಈ ಜಾತಿಯ ಮೀನುಗಳನ್ನು ಗುರುತಿಸಲಾಗಿದೆ.
ಪ್ರಾಕೃತಿಕವಾಗಿ ಆರೋಗ್ಯಯುತವಾಗಿರುವ ಶುದ್ಧ ನೀರು, ವೇಗವಾಗಿ ಹರಿಯುವ ಬೆಣಚುಕಲ್ಲುಗಳಿಂದ ಕೂಡಿದ ನದಿ ಪಾತ್ರಗಳಲ್ಲಿ ಮಹಶೀರ್ ಮೀನುಗಳು ಕಂಡು ಬರುತ್ತದೆ. ಆವಾಸ ಸ್ಥಾನ ಶುದ್ಧವಾಗಿರುವ ಸ್ಥಳಗಳಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಹಾಗಾಗಿಯೇ ನದಿ ನೀರಿನ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮಹಶೀರ್ ಜಾತಿಯ ಮೀನುಗಳು ಅಪಾಯದಲ್ಲಿದೆ. ಸಂತಾನೋತ್ಪತ್ತಿ ಸಂದರ್ಭ ಬದುಕುಳಿಯುವ ಮೀನುಗಳ ಶೇಕಡಾವಾರು ಪ್ರಮಾಣ ತೀರಾ ಕೆಳ ಮಟ್ಟ ತಲುಪಿದೆ. ಇದರಿಂದಾಗಿ ಮಹಶೀರ್ ಮೀನಿನ ಸಂತತಿ ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿ ಸೇರುವಂತಾಗಿದೆ.
ದೊಡ್ಡದಾದ ತಲೆ ಇರುವುದರಿಂದ ಮಹಾ ಮತ್ತು ಶಿರ ಸೇರಿ ಮಹಶೀರ್ ಹೆಸರು ಬಂದಿರಬಹುದು ಅಥವಾ ದೊಡ್ಡದಾದ ಹುರುಪೆಗಳು ಇರುವುದರಿಂದ ಮಹಾ ಮತ್ತು ಶಲ್ಕ್ ಸೇರಿ ಮಹಶೀರ್ ಆಗಿರಬಹುದು ಎನ್ನುವ ಅಭಿಪ್ರಾಯಗಳಿವೆ. ಕ್ರೀಡಾ ಮೀನುಗಳಾಗಿ ಗುರುತಿಸಿಕೊಂಡಿದ್ದು, ನೀರಿನಲ್ಲಿ ಸಮಬಲದ ಹೋರಾಟ ನಡೆಸಲು ಶಕ್ತವಾಗಿರುವುದರಿಂದ 'ನೀರಿನ ಹುಲಿ' ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಗೋಲ್ಡನ್ ಮಹಶೀರ್, ಡೆಕ್ಕನ್ ಮಹಶೀರ್, ಟಾರ್ ಕುಲಕರ್ಣಿ ಜಾತಿಯ ಮಹಶೀರ್‌ಗಳು ಇವೆ.
ಅಮೂಲ್ಯ ಜೀವ ವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಕೊಡಗಿನ ನದಿಗಳು ಅಪರೂಪದ ಜಲಚರಗಳಿಗೆ ಆಶ್ರಯ ತಾಣವೂ ಹೌದು. ಅಳಿವಿನಂಚಿನಲ್ಲಿರುವ ಮಹಶೀರ್ ಮೀನುಗಳು ವಿಶೇಷವಾಗಿ ಇಲ್ಲಿಯ ಕಾವೇರಿ ಮತ್ತು ಹಾರಂಗಿ ನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಮಹಶೀರ್ ಮೀನುಗಳ ರಕ್ಷಣೆಗಾಗಿಯೇ ನೆಲ್ಯಹುದಿಕೇರಿ ಸೇತುವೆಯಿಂದ ಕೊಡಗು-ಹಾಸನ ಗಡಿಯ ಶಿರಂಗಾಲ ತನಕ ಕಾವೇರಿ ನದಿಯನ್ನು ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ. ಇಲ್ಲಿ ಮಹಶೀರ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.
ಮಹಶೀರ್ ಮೀನುಗಳನ್ನು ಸಂರಕ್ಷಿಸುವುದಕ್ಕೋಸ್ಕರ ಇನ್ನೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆ ತನಕದ ಪ್ರದೇಶ ಮತ್ತು ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮವನ್ನು ಮತ್ಸö್ಯಧಾಮವನ್ನಾಗಿ ಘೋಷಣೆ ಮಾಡಬೇಕು ಎನ್ನುವುದು ಪರಿಸರ ಪ್ರಿಯರ ಬೇಡಿಕೆ ಆಗಿತ್ತು. ಈ ಸಂಬAಧ ಈ ಹಿಂದೆ ಮೀನುಗಾರಿಕೆ ಸಚಿವರು, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರು ಸೇರಿದಂತೆ ಸಂಬAಧಿಸಿದವರ ಗಮನ ಸೆಳೆಯಲಾಗಿತ್ತು. ಮೀನುಗಾರಿಗೆ ಇಲಾಖೆಯ ಜಿಲ್ಲೆಯ ಕ್ರಿಯಾಶೀಲ ಅಧಿಕಾರಿಗಳು ಈ ಸಂಬAಧ ಪರಿಣಾಮಕಾರಿ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಿದ್ದರು.
ಪರಿಸರಾಸಕ್ತರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಇದೀಗ ಕುಶಾಲನಗರ ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿನ ಕಾವೇರಿ ನದಿಯ 2 ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು 'ಕುಶಾಲನಗರ ನಿಸರ್ಗಧಾಮ ಮತ್ಸö್ಯಧಾಮ' ಎಂದು ಘೋಷಿಸಿ ಏ. 28ರಂದು ಆದೇಶ ಹೊರಡಿಸಿದೆ. 'ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ "ಮಹಶೀರ್" ಮೀನುಗಳ ವಿವಿಧ ಪ್ರಬೇಧಗಳ ಸಂತತಿಯನ್ನು ಸಂರಕ್ಷಿಸುವ ದೃಷ್ಟಿಯಿಂದ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾವೇರಿ ನದಿ ಹರಿಯುತ್ತಿರುವ ಎಡದಂಡೆ ಪ್ರದೇಶವಾದ ಮಾದಾಪಟ್ಟಣ ಗ್ರಾಮದ ಸರ್ವೆ ನಂಬರ್ 104/2 ಮತ್ತು 104/3, ಬೆಳ್ಳೂರು ಗ್ರಾಮದ ಸರ್ವೆ ನಂಬರ್ 37, 38/2, 38/1, 38/4, 54/2 ಮತ್ತು 60/2ರ ವ್ಯಾಪ್ತಿಯಲ್ಲಿ ಬರುವ ಸುಮಾರು 2 ಕಿ.ಮೀ. ಪ್ರದೇಶವನ್ನು ತಕ್ಷಣ ದಿಂದ ಜಾರಿಗೆ ಬರುವಂತೆ "ಕುಶಾಲನಗರ ನಿಸರ್ಗಧಾಮ ಮಧಾಮ" ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಯಾವುದೇ ತರಹದ ಮೀನುಗಾರಿಕೆ ಚಟುವಟಿಕೆಯನ್ನು ನಿಷೇಧಿಸಿದೆ,' ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಸ್. ಚಿನ್ನೂಬಾಯಿ ಆದೇಶ ಮಾಡಿದ್ದಾರೆ.
ಕಾವೇರಿ ನದಿಯನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವ ನೆಲ್ಯಹುದಿಕೇರಿ ಸೇತುವೆಯಿಂದ ಕೊಡಗು-ಹಾಸನ ಗಡಿಯ ಶಿರಂಗಾಲ ತನಕದ ಮಧ್ಯದಲ್ಲಿ ಬರುವ 'ಕುಶಾಲನಗರ ನಿಸರ್ಗಧಾಮ ಮತ್ಸö್ಯಧಾಮ'ದಲ್ಲಿ ಈ ಹಿಂದೆ ಅಸಂಪ್ರದಾಯಿಕ ವಿಧಾನಗಳ ಮೂಲಕ ಮೀನು ಹಿಡಿಯುವುದಕ್ಕೆ ನಿಷೇಧ ಇತ್ತು. ಆದರೂ ಸಂಬAಧಿಸಿದವರ ಕಣ್ಣು ತಪ್ಪಿಸಿ ಕಳ್ಳಮಾರ್ಗದಲ್ಲಿ ಮೀನು ಬೇಟೆ ನಡೆಯುತ್ತಿತ್ತು. ಮೀನು ಬೇಟೆಗಾರರು ಸಿಕ್ಕಿಹಾಕಿಕೊಂಡರೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿತ್ತು. ಆದರೆ ಈಗ ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿನ ಕಾವೇರಿ ನದಿಯ 2 ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು 'ಮತ್ಸö್ಯಧಾಮ'ವನ್ನಾಗಿ ಘೋಷಣೆ ಮಾಡಿರುವುದರಿಂದ ಮಹಶೀರ್ ಮೀನುಗಳ ರಕ್ಷಣೆಗೆ ಹೆಚ್ಚಿನ ಕಾನೂನು ಬಲ ಸಿಕ್ಕಿದಂತಾಗಿದೆ.
ಮೊದಲೆಲ್ಲಾ ಈ ಭಾಗದಲ್ಲಿ ಅಕ್ರಮವಾಗಿ ಮಹಶೀರ್ ಮೀನು ಹಿಡಿದಿರುವುದು ಕಂಡುಬAದರೆ ವಿಷಯ ಗೊತ್ತಾದ ಕೂಡಲೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮೀನುಗಳನ್ನು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಿ, ಮಹಶೀರ್ ಮೀನುಗಳನ್ನು ಹಿಡಿಯದಂತೆ ಬುದ್ಧಿವಾದ ಹೇಳಿ ಕಳುಹಿಸುತ್ತಿದ್ದರು. ಅಲ್ಲಲ್ಲಿ ಮೀನುಗಾರರಿಗೆ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿತ್ತು. ಆದರೆ ಇಲ್ಲಿ ಈಗ ಸಂಪೂರ್ಣ ಮೀನುಗಾರಿಕೆ ಚಟುವಟಿಕೆಯನ್ನೇ ನಿಷೇಧಿಸಿರುವುದರಿಂದ ನಿಷೇಧವನ್ನು ಉಲ್ಲಂಘಿಸಿದವರು ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.
ಸರಿಯಾಗಿ ಬೆಳೆದ ಮಹಶೀರ್ ಮೀನು 50-60 ಕೆಜಿ ತನಕ ತೂಗುತ್ತದೆ. ಈ ಮೀನಿನ ಮರಿಯನ್ನು ಕೃತಕವಾಗಿ ಉತ್ಪಾದನೆ ಮಾಡುವುದು ಅಷ್ಟು ಸುಲಭವಲ್ಲ. ಮಹಾರಾಷ್ಟçದ ಪುಣೆ ಬಳಿಯ ಲೋನಾವಾಲದಲ್ಲಿ ಟಾಟಾ ಜಲವಿದ್ಯುತ್ ಘಟಕದ ಆವರಣದಲ್ಲಿರುವ ಮಹಶೀರ್ ತಳಿ ಮತ್ತು ಪಾಲನಾ ಕೇಂದ್ರದಲ್ಲಿ ಕೃತಕವಾಗಿ ಸಂತಾನೋತ್ಪತ್ತಿ ಮಾಡುವ ಘಟಕ ಇದೆ. ಇದನ್ನು ಹೊರತುಪಡಿಸಿದರೆ ದೇಶದಲ್ಲೇ 2ನೇ ಘಟಕ ಕುಶಾಲನಗರ ತಾಲೂಕು ಹಾರಂಗಿಯಲ್ಲಿದೆ. ಇಲ್ಲಿರುವ ಮೀನುಗಾರಿಕೆ ಇಲಾಖೆಯ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಮಹಶೀರ್ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ನಡೆಯುತ್ತಿದೆ. ಇಲ್ಲಿ ಉತ್ಪಾದನೆ ಆಗುವ ಮೀನು ಮರಿಗಳನ್ನು ಪ್ರತಿ ವರ್ಷವೂ ನದಿಗೆ ಬಿಡಲಾಗುತ್ತದೆ. ವಿಶೇಷ ಎಂದರೆ ಇಲ್ಲಿಗೆ ತಾಯಿ ಮೀನುಗಳನ್ನು ಲೋನಾವಾಲದಿಂದಲೇ ತರಿಸಿಕೊಳ್ಳಲಾಗುತ್ತದೆ. ಬುಧವಾರವಷ್ಟೇ (ಮೇ7) ಹಾರಂಗಿ ಅಣೆಕಟ್ಟೆ ಮುಂಭಾಗದಲ್ಲಿ ಹಾರಂಗಿ ನದಿಗೆ 3 ಸಾವಿರ ಮಹಶೀರ್ ಮೀನಿನ ಮರಿಗಳನ್ನು ಬಿಡಲಾಗಿತ್ತು.
ಕುಶಾಲನಗರ ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿನ ಕಾವೇರಿ ನದಿಯ 2 ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು 'ಕುಶಾಲನಗರ ನಿಸರ್ಗಧಾಮ ಮತ್ಸö್ಯಧಾಮ' ಎಂದು ಘೋಷಿಸಿ ಸರ್ಕಾರ ಏ. 28ರಂದು ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಯಾವುದೇ ತರಹದ ಮೀನುಗಾರಿಕೆ ಚಟುವಟಿಕೆಯನ್ನು ಅಲ್ಲಿ ನಿಷೇಧಿಸಲಾಗಿದೆ. ಮತ್ಸö್ರ್ಯಧಾಮ ಘೋಷಣೆಯಿಂದ ಮಹಶೀರ್ ಮೀನಿನ ರಕ್ಷಣೆಗೆ ಹೆಚ್ಚಿನ ಕಾನೂನು ಬಲ ಸಿಕ್ಕಂತಾಗಿದೆ. ಕೂಡಿಗೆಯಲ್ಲಿ ಉತ್ಪಾದನೆ ಆಗುವ ಮಹಶೀರ್ ಮರಿಗಳನ್ನು ಇನ್ನು ಮುಂದೆ ನಿಸರ್ಗಧಾಮದಲ್ಲೂ ಬಿಡಲಾಗುವುದು.'
ಸಚಿನ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ, ಕೊಡಗು
ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರ ಶುರುವಾಗಿದ್ದೇ ಮಹಶೀರ್ ಮೀನಿನ ಮರಿ ಉತ್ಪಾದಿಸಲು. ಹಾಗಾಗಿ ಅಲ್ಲಿ ಮಹಶೀರ್ ಮೀನು ಮರಿ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದ್ದು, ರೈತರಿಗೆ ಪೂರೈಸಲು ಇತರ ಜಾತಿಯ ಮೀನಿನ ಮರಿಗಳನ್ನೂ ಉತ್ಪಾದಿಸಲಾಗುತ್ತಿದೆ. ಇಲ್ಲಿ ಉತ್ಪಾದನೆ ಆಗುವ ಮಹಶೀರ್ ಮರಿಗಳನ್ನು ಕೇರಳಕ್ಕೂ ತೆಗೆದುಕೊಂಡು ಹೋಗುತ್ತಾರೆ. ರಾಮನಾಥಪುರ, ಮಂಡ್ಯದಲ್ಲೂ ಕಾವೇರಿ ನದಿಗೆ ಬಿಡಲಾಗಿದೆ. ಸಂರಕ್ಷಣಾ ಕ್ರಮಗಳಿಂದಾಗಿ ಈಗ ಕಾವೇರಿ ನದಿಯಲ್ಲಿ ಅಲ್ಲಲ್ಲಿ ಮಹಶೀರ್ ಮೀನು ಕಾಣಬಹುದು. ಇದನ್ನು ಹಿಡಿಯದಂತೆ ಮೀನುಗಾರರು ಎಚ್ಚರಿಕೆ ವಹಿಸಬೇಕು.
ಮಿಲನಾ ಭರತ್, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಸೋಮವಾರಪೇಟೆ