ಭಟ್ಕಳ ಕಡಲ ತೀರದಲ್ಲಿ ಮತ್ಸ್ಯ ರಾಶಿ

8bkl1
Published on

ರಾಮಚಂದ್ರ ಕಿಣಿ ಭಟ್ಕಳ
ಮಳೆ- ಗಾಳಿಯಿಂದಾಗಿ ಬೋಟುಗಳು ಮೀನುಗಾರಿಕೆಗೆ ಇಳಿಯದೆ ಬಂದರುಗಳಲ್ಲಿ ಲಂಗರು ಹಾಕಿರೋದು ಒಂದೆಡೆಯಾದರೆ, ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಾಗದ ಕಡಲ ತೀರಗಳಲ್ಲಿ ಭಾನುವಾರ ರಾಶಿ ರಾಶಿ ಗೊಬ್ರ ಮೀನು ದೊರೆತು ಅಚ್ಚರಿಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ಮತ್ತೆ ಹೆಚ್ಚಾಗಿದ್ದು, ಆ. 11ರವರೆಗೆ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದಾಗಿ ಮೀನುಗಾರರು ಕಡಲಿಗೆ ಇಳಿಯದೆ, ತಮ್ಮ ಬೋಟ್​ಗಳನ್ನು ಬಂದರುಗಳಲ್ಲೇ ಲಂಗರು ಹಾಕಿ ಮಳೆ- ಗಾಳಿ ಕಡಿಮೆಯಾಗುವುದನ್ನು ಕಾಯುತ್ತಿದ್ದಾರೆ. ಈ ನಡುವೆ ಭಟ್ಕಳ ತಾಲೂಕಿನ ಮುರ್ಡೆಶ್ವರ, ಮಾವಿನಕುರ್ವಾ ಬಂದರು ಸೇರಿ ವಿವಿಧೆಡೆ ಗೊಬ್ರ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿವೆ. ಇವು ಸಣ್ಣ ಮರಿ ಮೀನುಗಳಾಗಿದ್ದು, ಈ ಭಾಗದಲ್ಲಿ ಮುರಿಯ ಅಂತಲೂ ಇದಕ್ಕೆ ಕರೆಯುತ್ತಾರೆ. ಈ ಮೀನುಗಳು ಹೆಚ್ಚಾಗಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತವೆ. ಆದರೆ, ಈ ರೀತಿ ದಡಕ್ಕೆ ಬಂದು ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ತನ್ನಿಂದತಾನೆ ಅಲೆಗಳ ಜತೆಗೆ ದಡಕ್ಕೆ ಬಂದು ಬೀಳುತ್ತಿದ್ದ ಈ ಮೀನುಗಳನ್ನು ಹಿಡಿಯಲು ಕಡಲ ತೀರಗಳಲ್ಲಿ ಜನರ ದಂಡು ನೆರೆದಿತ್ತು. ದಡಕ್ಕೆ ಮೀನುಗಳು ಬರುತ್ತಿರುವ ಸುದ್ದಿ ತಿಳಿದು ಅನೇಕರು ಕಡಲ ತೀರಗಳತ್ತ ಧಾವಿಸಿದ್ದರು. ಈ ರೀತಿ ಮೀನುಗಳು ದಡಕ್ಕೆ ಬಂದು ಬೀಳುತ್ತಿರುವುದು ಹವಾಮಾನ ವೈಪರೀತ್ಯದ ಸಂಕೇತ ಎನ್ನುತ್ತಿದ್ದಾರೆ ಮೀನುಗಾರರು ಹಾಗೂ ಕಡಲ ಜೀವ ಶಾಸ್ತ್ರಜ್ಞರು.

ಉಷ್ಣತೆಯಲ್ಲಿ ವ್ಯತ್ಯಾಸಗಳಾಗುವುದರಿಂದ ಈ ತರಹದ ಬದಲಾವಣೆ ಆಗುವ ಸಾಧ್ಯತೆಗಳಿವೆ. ವಿಪರೀತ ಮಳೆಯಿಂದ ಸಮುದ್ರದಾಳದ ನೀರು ತಣ್ಣಗಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮೀನುಗಳು ಸಮತೋಲನ ಕಾಯ್ದುಕೊಳ್ಳಲು ಬೆಚ್ಚಗಿನ ನೀರಿನ ಹುಡುಕಾಟದಲ್ಲಿ ತೊಡಗುತ್ತವೆ. ಸಾಮಾನ್ಯವಾಗಿ ದಡದ ಬಳಿಯ ನೀರು ಬೆಚ್ಚಗಿರುವುದರಿಂದ ಅವು ದಡದತ್ತ ವಾಲುತ್ತವೆ. ಇದು ಒಂದು ಕಾರಣವಾದರೆ, ಚರಂಡಿಯ ನೀರು ಸಮುದ್ರ ಸೇರಿ ಅದರಲ್ಲಿನ ಲವಣಗಳು ತಳಕ್ಕೆ ಕುಳಿತಿರುತ್ತವೆ. ಇದರಿಂದಾಗಿ ಸಮುದ್ರ ಉಬ್ಬಿ ಮೀನುಗಳು ದಡಕ್ಕೆ ಬರುವ ಸಾಧ್ಯತೆಗಳಿವೆ. | ಡಾ. ಜಗನ್ನಾಥ ಎಲ್. ರಾಥೋಡ, ಚೇರ್ಮನ್, ಕಡಲಜೀವ ಶಾಸ್ತ್ರ ವಿಭಾಗ ಕವಿವಿ ಧಾರವಾಡ

ಭಾರಿ ಪ್ರಮಾಣದಲ್ಲಿ ಮುರಿಯ ಮೀನುಗಳು ಸಮುದ್ರದ ದಡದಲ್ಲಿ ಬಂದು ಬಿದ್ದಿರುವುದನ್ನು ನಾನೆಂದೂ ಕಂಡಿಲ್ಲ. ಆಳ ಸಮುದ್ರದಲ್ಲಿ ವಾಸಿಸುವ ಮೀನುಗಳು ಇಲ್ಲಿ ಬಂದು ಬೀಳುತ್ತವೆ ಅಂದರೆ ಅಲ್ಲಿನ ವಾತಾವರಣ ಸರಿ ಇಲ್ಲ ಎಂದರ್ಥ.| ವೆಂಕಟ್ರಮಣ ಮೊಗೇರ ಪರ್ಷಿಯನ್ ಬೋಟ್ ಯೂನಿಯನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net