ಮತ್ಸ್ಯಧಾಮ ಘೋಷಿಸಲು ಸಿದ್ಧತೆ

21mdk05
Published on

ಮಡಿಕೇರಿ:

ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾವೇರಿ ನಿಸರ್ಗಧಾಮದ ಸುತ್ತಲೂ ಹರಿಯುವ ಕಾವೇರಿ ನದಿ ಮತ್ತು ಹಾರಂಗಿ ಅಣೆಕಟ್ಟೆ ಬಳಿಯ ಹಾರಂಗಿ ನದಿಯನ್ನು ’ಮತ್ಸ್ಯಧಾಮ’ ಎಂದು ಘೋಷಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಮೀನುಗಾರಿಕೆ ಇಲಾಖೆ ಪೂರಕ ಕ್ರಮಗಳನ್ನು ತೆಗೆದುಕೊಂಡಿದ್ದು, ಜೀವ ವೈವಿಧ್ಯ ವವಸ್ಥೆಯಲ್ಲಿ ಅಪರೂಪ ಅನ್ನಿಸಿಕೊಂಡಿರುವ ಮಹಶೀರ್ ಮೀನಿನ ರಕ್ಷಣೆಗೆ ದಿಟ್ಟ ಹೆಜ್ಜೆ ಇಡಲಾಗುತ್ತಿದೆ. ಈ ಮೂಲಕ ಪ್ರವಾಸಿ ಆಕರ್ಷಣೆ ಹೆಚ್ಚಿಸುವ ಯೋಜನೆಯನ್ನೂ ಇಲಾಖೆ ರೂಪಿಸಿದೆ.

ರಾಜ್ಯದಲ್ಲಿ ಈಗಾಗಲೇ ೧೧ ಕಡೆಗಳಲ್ಲಿ ಮತ್ಸ್ಯಧಾಮಗಳಿದ್ದು, ಕೊಡಗಿನ ಎರಡು ಸ್ಥಳಗಳಲ್ಲಿ ಮತ್ಸ್ಯಧಾಮ ಘೋಷಣೆ ತಯಾರಿ ನಡೆಯುತ್ತಿದೆ. ಬೇರೆ ಮತ್ಸ್ಯಧಾಮಗಳಲ್ಲಿ ವಿವಿಧ ಜಾತಿಯ ಮೀನುಗಳು ಕಂಡುಬಂದರೆ. ಕೊಡಗಿನ ಈ ಹೊಸ ಮತ್ಸ್ಯಧಾಮಗಳು ಕೇವಲ ಅಪರೂಪದ ಮಹಶೀರ್ ಮೀನುಗಳ ರಕ್ಷಣೆಗಾಗಿಯೇ ರೂಪುಗೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿ ಗುರುತಿಸಿಕೊಂಡಿರುವ ಕಾವೇರಿ ನಿಸರ್ಗಧಾಮ ವ್ಯಾಪ್ತಿಯ ಕಾವೇರಿ ನದಿ ಮತ್ತು ಹಾರಂಗಿ ಅಣೆಕಟ್ಟೆ ಕೆಳಭಾಗದ ೫ ಕಿಮೀ ವ್ಯಾಪ್ತಿಯ ಹಾರಂಗಿ ನದಿಯನ್ನು ಮತ್ಸ್ಯಧಾಮ ಎಂದು ಘೋಷಣೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ಹೆಚ್ಚಾಗಿ ಕಂಡು ಬರುವ ಮಹಶೀರ್ ಮೀನು ರಕ್ಷಣೆಗೆ ಈಗಾಗಲೇ ಸಾಕಷ್ಟು ಕ್ರಮಗಳು ಜಾರಿಯಲ್ಲಿದೆ. ಕೊಡಗಿನಲ್ಲಿ ನೆಲ್ಯಹುದಿಕೇರಿಯಿಂದ ಶಿರಂಗಾಲ ತನಕ ೩೫ ಕಿಮೀ ಪ್ರದೇಶವನ್ನು ಮೀನುಗಾರಿಕೆ ನಿಷೇಧಿತ ಪ್ರದೇಶ ಎಂದು ಈಗಾಗಲೇ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಬಲೆ ಹಾಕಿ ಮೀನು ಹಿಡಿಯುವುದು, ಡೈನಾಮೈಟ್ ಬಳಕೆ, ನದಿಗೆ ವಿಷ ಬೆರೆಸುವುದು ಸೇರಿ ಸಾಮೂಹಿಕ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಇದೆ. ಇದನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಆದರೆ ವ್ಯಯಕ್ತಿಕ ಬಳಕೆಗೆ ಬೇಕಾದಷ್ಟು ಮೀನನ್ನು ಗಾಳ ಹಾಕಿ ಹಿಡಿಯುವುದಕ್ಕೆ ಯಾವುದೇ ಅಡ್ಡಿ ಇಲ್ಲ. ’ಮತ್ಸ್ಯಧಾಮ’ ಘೋಷಣೆ ಈಗ ಇದರ ಮುಂದುವರಿದ ಹಂತವಾಗಿದ್ದು, ಮಹಶೀರ್ ಸಂರಕ್ಷಣೆಗೆ ಮತ್ತಷ್ಟು ಕಾನೂನಿನ ಬಲ ಸಿಗಲಿದೆ.

ದೊಡ್ಡ ತಲೆ ಹೊಂದಿರುವುದರಿಂದ ಈ ಮೀನಿಗೆ ಮಹಶೀರ್ ಎನ್ನುವ ಹೆಸರಿದೆ. ಶುದ್ಧ ನೀರಿನ ಸಿಂಹ, ದೇವರ ಮೀನು ಎಂದೂ ಕರೆಯಲಾಗುತ್ತದೆ. ೬೦ ವರ್ಷದ ಜೀವಿತಾವಧಿಂಲ್ಲಿ ೬೦ ಕೆ.ಜಿ. ತನಕವೂ ಬೆಳೆಯುತ್ತದೆ. ಇದು ತಿನ್ನಲು ಯೋಗ್ಯವಾದ ಮೀನಲ್ಲ. ಗಾಳ ಹಾಕಿ ಹಿಡಿಯುವುದೇ ದೊಡ್ಡ ಸಾಹಸ ಆಗಿರುವುದರಿಂದ ಆಂಗ್ಲರ ಅಳ್ವಿಕೆ ಸಮಯದಲ್ಲಿ ಮಹಶೀರ್ ಮೀನು ಕ್ರೀಡೆಗೆ ಹೆಸರಾಗಿತ್ತು. ಕಾವೇರಿ ನದಿಯಲ್ಲಿ ಕಿತ್ತಳೆ ರೆಕ್ಕೆ ಮತ್ತು ನೀಲಿ ರೆಕ್ಕೆ ಎಂಬ ಎರಡು ಬಗೆಯ ಮಹಶೀರ್ ಮೀನುಗಳಿವೆ. ಆದರೆ ಕಿತ್ತಳೆ ಬಣ್ಣದ ರೆಕ್ಕೆಯ ಮೀನುಗಳ ಪ್ರಮುಖ ಆವಾಸ ಸ್ಥಾನ ಕಾವೇರಿ ನದಿ. ನೈಸರ್ಗಿಕ ಆರೋಗ್ಯದಿಂದ ಕೂಡಿರುವ ನೀರಿನಲ್ಲಿ ಮಾತ್ರ ಮಹಶೀರ್ ಮೀನುಗಳು ಕಂಡುಬರುತ್ತವೆ. ಮಹಶೀರ್ ಮೀನುಗಳು ಇರುವ ಸ್ಥಳದಲ್ಲಿ ಮೀನು ಮತ್ತು ಮೀನನ್ನು ಅವಲಂಬಿಸಿ ಯಾವೆಲ್ಲಾ ಜೀವಿಗಳು ಇರಬೇಕೋ ಅವೆಲ್ಲವೂ ಇರುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿಯೇ ಮಹಶೀರ್ ಮೀನಿಗೆ ಸಾಕಷ್ಟು ಮಹತ್ವ ನೀಡಲಾಗುತ್ತದೆ.

ಅಕ್ರಮ ಮೀನುಗಾರಿಕೆ, ನದಿಗೆ ಬಂದು ಸೇರುವ ಕಾಫಿ ಪಲ್ಪಿಂಗ್ ನೀರು, ನಗರ ಪ್ರದೇಶಗಳ ತ್ಯಾಜ್ಯ ನೀರು, ಮಿತಿಮೀರಿದ ಮರಳು ಗಣಿಗಾರಿಕೆ, ನದಿ ಬದಿಯಲ್ಲಿ ಹಾದುಹೋಗುವ ರಸ್ತೆಗಳೇ ಮಹಶೀರ್ ಮೀನುಗಳ ಶತ್ರುಗಳು ಎಂದು ಬಿಂಬಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನದಿ ನೀರಿನ ತಾಪಮಾನ ಹೆಚ್ಚುತ್ತಿರುವುದೂ ಕಳವಳಕಾರಿ ಆಗಿದೆ. ೨೪-೨೫ ಡಿಗ್ರಿ ತಾಪಮಾನದಲ್ಲಿ ಮಹಶೀರ್ ಆರಾಮವಾಗಿ ಬದುಕುತ್ತವೆ. ಇದಕ್ಕಿಂತ ಹೆಚ್ಚಾದರೆ ಅವುಗಳಿಗೆ ಕಷ್ಟ.

ಇದೀಗ ಜಿಲ್ಲೆಯಲ್ಲಿ ೨ ಮತ್ಸ್ಯಧಾಮಗಳು ಮಹಶೀರ್ ಮೀನು ಸಂರಕ್ಷಣೆಯ ಉದ್ದೇಶದಿಂದಲೇ ಘೋಷಣೆ ಆಗುತ್ತಿರುವುದು ದೊಡ್ಡ ನಿರೀಕ್ಷೆಗೆ ಕಾರಣವಾಗಿದೆ. ಕಾವೇರಿ ನದಿಯಲ್ಲಿ ೩೫ ಕಿಮೀ ಪ್ರದೇಶವನ್ನು ಮೀನುಗಾರಿಕೆ ನಿಷೇಧಿತ ಪ್ರದೇಶ ಎಂದು ಗುರುತಿಸಿದ್ದರೂ ಅಕ್ರಮ ಮೀನುಗಾರಿಕೆ ಸದ್ದಿಲ್ಲದೆ ನಡೆಯುತ್ತಲೇ ಇದೆ. ಮರಳು ಗಣಿಗಾರಿಕೆಗೂ ಕಡಿವಾಣ ಬಿದ್ದಿಲ್ಲ. ’ಮತ್ಸ್ಯಧಾಮ’ ಅಸ್ತಿತ್ವಕ್ಕೆ ಬರುವುದರಿಂದ ಮಹಶೀರ್ ಸಂರಕ್ಷಣೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲಾಖೆಗೆ ಹೆಚ್ಚಿನ ಅನುದಾನ ಕೂಡ ಸಿಗಲಿದ್ದು, ಮಹಶೀರ್ ಸಂರಕ್ಷಣೆ ನಿಟ್ಟಿನಲ್ಲಿ ಹಲವು ರೀತಿಯ ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲೂ ಅನುಕೂಲ ಆಗಲಿದೆ.

ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ರೈತರಿಗೆ ವಿತರಿಸಲು ವಿವಿಧ ಜಾತಿಯ ಮೀನು ಮರಿಗಳನ್ನು ಉತ್ಪಾದಿಸುವುದರ ಜತೆಗೆ ಮಹಶೀರ್ ಮೀನು ಮರಿಗಳ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಇಲ್ಲಿ ಉತ್ಪಾದನೆಯಾದ ಮೀನು ಮರಿಗಳ ಪೈಕಿ ೨೦ ಸಾವಿರ ಮರಿಗಳನ್ನು ಕಾವೇರಿ ನದಿಗೆ ಮತ್ತು ೧೫ ಸಾವಿರ ಮೀನು ಮರಿಗಳನ್ನು ಹಾರಂಗಿ ನದಿಗೆ ಈಗಾಗಲೇ ಬಿಡಲಾಗಿದೆ. ’ಮತ್ಸ್ಯಧಾಮ’ ಘೋಷಣೆ ಆದ ಬಳಿಕ ಲಭ್ಯ ಅನುದಾನ ಬಳಸಿಕೊಂಡು ಇಲ್ಲಿಯ ಮೀನು ಮರಿ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುವ ಯೋಜನೆ ಇದ್ದು ಮಹಷೀರ್ ಮೀನು ಸಂತತಿ ಸಂರಕ್ಷಣೆಗೂ ಸಹಾಯಕವಾಗಲಿದೆ.

ಮತ್ಸ್ಯಧಾಮವನ್ನು ಪ್ರವಾಸಿಗರನ್ನು ಆಕರ್ಷಿಸಲು ಬಳಸಿಕೊಳ್ಳುವ ಸಾಧ್ಯತೆ ಬಗ್ಗೆಯೂ ಚಿಂತನೆ ನಡೆದಿದೆ. ಕಾವೇರಿ ನಿಸರ್ಗಧಾಮ ಮತ್ತು ಹಾರಂಗಿ ಅಣೆಕಟ್ಟೆ ಈಗಾಗಲೇ ಜಿಲ್ಲೆಯ ಪ್ರವಾಸಿ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ’ಮತ್ಸ್ಯಧಾಮ’ಮವನ್ನು ಆಕರ್ಷಣೀಯಗೊಳಿಸಿದರೆ ಇಲ್ಲಿಗೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಇದರಿಂದ ಇಲಾಖೆಗೆ ಆರ್ಥಿಕ ಲಾಭವಾಗುವುದರ ಜತೆಗೆ ಈ ಪ್ರದೇಶ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎನ್ನುವ ನಿರೀಕ್ಷೆ ಇದೆ.

ಮಲೆನಾಡಿನಲ್ಲಿ ಹುಟ್ಟಿ ಹರಿಯುವ ನದಿಗಳಲ್ಲಿ ಅಪರೂಪದ ಮೀನು ವೈವಿಧ್ಯತೆ ಇರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮೀನುಗಾರಿಕೆ ಕಾಯ್ದೆ ಅಡಿಯಲ್ಲಿ ಮತ್ಸ್ಯಧಾಮ ಎಂದು ಘೋಷಿಸುವಂತೆ ೨೦೨೦ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ದಕ್ಷಿಣ ಕನ್ನಡದಲ್ಲಿ ೮, ಉಡುಪಿ ೧, ಉತ್ತರ ಕನ್ನಡ ೧, ಕೊಡಗು ೨, ಮಂಡ್ಯ ೨, ಕಲಬುರಗಿ ೧ ಸ್ಥಳವನ್ನು ಮತ್ಸ್ಯಧಾಮ ಎಂದು ಘೋಷಿಸಲು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೊಡಗಿ ೨ ಸ್ಥಳಗಳಲ್ಲಿ ಕುಶಾಲನಗರ ಮತ್ತು ಮಡಿಕೇರಿ ತಾಲೂಕಿನ ಪಾಕ ಸೇರಿದ್ದವು. ಇದೀಗ ಪಾಕ ಕೈಬಿಟ್ಟು ಹಾರಂಗಿ ಸೇರಿಸಲಾಗಿದೆ. ಶೃಂಗೇರಿ, ದಕ್ಷಿಣಕನ್ನಡದ ತೊಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಳೆ, ರಾಮನಾಥಪುರ ಸೇರಿ ೧೧ ಸ್ಥಳಗಳನ್ನು ಈಗಾಗಲೇ ಮತ್ಸ್ಯಧಾಮ ಎಂದು ಘೋಷಿಸಲಾಗಿದೆ. ಈ ಮತ್ಸ್ಯಧಾಮಗಳಲ್ಲಿ ಮಹಶೀರ್, ಹರಗಿ(ಹುಲ್ಲುಗೆಂಡೆ), ಪರ್ಲಸ್ಪಾಟ್, ಪಪ್ಫರ್, ಸಾಲ್ಮೊಸ್ಟೋಮ್, ಗಾರ್, ಬೆರಿಲ್, ಸೆಟ್ನಾಯಿ ಬಾರ್ಬ, ಪುಂಟಿಯಸ್, ಡೇನಿಯೊ, ಗ್ಲಾಸ್ ಫಿಶ್, ಕಿಲ್ಲಿ ಫಿಶ್ ಮುಂತಾದ ಅಪರೂಪದ ಮೀನು ಜಾತಿಗಳಿವೆ. ದೇಶದಲ್ಲಿ ಮತ್ಸ್ಯಧಾಮ ಘೋಷಣೆ ಮಾಡಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು.

ಕೋಟ್:

ಮಹಶೀರ್ ಎನ್ನುವ ಅಪರೂಪದ ಮೀನು ಕಾವೇರಿ ನದಿಯನ್ನು ತನ್ನ ಆವಾಸ ಸ್ಥಾನ ಮಾಡಿಕೊಂಡಿದೆ. ಜೀವ ವೈವಿಧ್ಯ ವ್ಯವಸ್ಥೆಯಲ್ಲಿ ಈ ಮೀನಿಗೆ ಪ್ರಮುಖ ಸ್ಥಾನವಿದೆ. ಇಂತಹ ಮೀನು ರಕ್ಷಿಸುವುದು ಪ್ರಜ್ಞಾವಂತರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಮಹಶೀರ್ ಮೀನು ಹೆಚ್ಚು ಇರುವ ಪ್ರದೇಶವನ್ನು ಮತ್ಸ್ಯಧಾಮ ಎಂದು ಘೋಷಿಸಿಲು ಸಿದ್ಧತೆ ನಡೆದಿದೆ. ಈ ಮೂಲಕ ಅಪರೂಪದ ಮಹಶೀರ್ ಮೀನುಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಸಚಿನ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ, ಕೊಡಗು

ಮಹಶೀರ್ ಮೀನು ಹೆಚ್ಚು ಕಂಡುಬರುವ ಹಾರಂಗಿ ಅಣೆಕಟ್ಟೆಯ ಕೆಳಭಾಗದ ಹಾರಂಗಿ ನದಿ ಮತ್ತು ಕಾವೇರಿ ನಿಸರ್ಗಧಾಮ ವ್ಯಾಪ್ತಿಯ ಕಾವೇರಿ ನದಿಯನ್ನು ಮತ್ಸ್ಯಧಾಮ ಎಂದು ಘೋಷಿಸಲಾಗುವುದು. ಇದಕ್ಕೆ ಸಂಬಂಧಿಸಿದ ಪೂರಕ ಕೆಲಸಗಳು ನಡೆಯುತ್ತಿದೆ. ಜಾಗದ ಸರ್ವೆ ನಂಬರ್ ಮತ್ತಿತರ ಮಾಹಿತಿಗಳಿಗಾಗಿ ಕಂದಾಯ ಇಲಾಖೆಯನ್ನು ಸಂಪರ್ಕಿಸಲಾಗಿದೆ. ಈ ಪ್ರದೇಶದಲ್ಲಿ ಮೀನುಗಳ ರಕ್ಷಣೆ ಮಾಡುವುದರ ಜತೆಗೆ ಪ್ರವಾಸಿ ಆಕರ್ಷಣೆಗಳನ್ನು ಹೆಚ್ಚಿಸುವ ಚಿಂತನೆಯೂ ಇದೆ.
ಸಚಿನ್, ಸಹಾಯಕ ನಿರ್ದೇಶಕ, ಮೀನು ಮರಿ ಉತ್ಪಾದನಾ ಕೇಂದ್ರ, ಹಾರಂಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net