

ರೋಣ: ಮಟ್ಕಾ, ಜೂಜಾಟ ಸೇರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಪೋಲಿಸ್ ಇಲಾಖೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪರಿಶಿಷ್ಟರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ಶಾಶ್ವತ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ದಲಿತ ಮುಖಂಡ ಮೌನೇಶ ಹಾದಿಮನಿ ಮಾತನಾಡಿ, ಸಮಾಜ ಕಲ್ಯಾಣ ಅಧಿಕಾರಿ ತಾಲೂಕಿನಲ್ಲಿ ಅಸ್ಪಶ್ಯತಾ ನಿವಾರಣಾ ಕಾರ್ಯಕ್ರಮಗಳಲ್ಲಿ ಕೇವಲ ದಲಿತರ ಕಾಲನಿಗಳಲ್ಲಿ ಮಾತ್ರ ಮಾಡುತ್ತಾರೆ. ಅವರಿಗೆ ಆ ಕಾರ್ಯಕ್ರಮದ ಪರಿಕಲ್ಪನೆಯೇ ಗೊತ್ತಿಲ್ಲ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ ಮಾತನಾಡಿ, ರೋಣ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕು ಇದಾಗಿದೆ. ತಾಲೂಕಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಕಾರಿ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡದಿರುವುದು ದೊಡ್ಡ ದುರಂತ. ಮುಂದಿನ ದಿನಗಳಲ್ಲಿ ಈ ಮಹಾ ವ್ಯಕ್ತಿಗಳ ಭವನ ನಿರ್ಮಾಣ ಮತ್ತು ಮೂರ್ತಿ ನಿರ್ಮಿಸಬೇಕು ಎಂದರು.
ದಲಿತ ಮುಖಂಡ ಪ್ರಕಾಶ ಹೊಸಳ್ಳಿ ಮಾತನಾಡಿ, ತಾಲೂಕಿನ ಜಿಗಳೂರು ಗ್ರಾಮದಲ್ಲಿ ಎಸ್‌ಸಿ ಪಟ್ಟಿಯಲ್ಲಿರುವ ನಕಲಿ ವ್ಯಕ್ತಿಗಳ ವಿರುದ್ಧ ಹಿಂದೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಆ ನಕಲಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಮುತ್ತಪ್ಪ ಹಲಗಿ ಮಾತನಾಡಿ, ತಾಲೂಕಿನ ಸವಡಿ ಗ್ರಾಮ ಸೇರಿ ಪ್ರತಿ ಗ್ರಾಮದಲ್ಲಿ ಮನೆ ಮತ್ತು ಬಿಡಿ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಬಕಾರಿ ಇಲಾಖೆಯವರು ಕ್ರಮ ವಹಿಸಿ ಕಡಿವಾಣ ಹಾಕಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ, ತಹಸೀಲ್ದಾರ್ ನಾಗರಾಜ ಕೆ., ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ನರಗುಂದ ಡಿವೈಎಸ್ಪಿ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಸಂಗಪ್ಪ ಹೊಸಮನಿ, ಹಣಮಂತ ದ್ವಾಸಲ, ಶರಣಪ್ಪ ದೊಡ್ಡಮನಿ, ಸೋಮು ನಾಗರಾಜ, ಸಂಜಯ ದೊಡ್ಡಮನಿ, ಹಣಮಂತ ಛಲವಾದಿ, ಮೈಲಾರಪ್ಪ ಮಾದರ, ದೇವೇಂದ್ರಪ್ಪ ಕೊಳ್ಳಪ್ಪನವರ. ಚಂದ್ರು ಹಂಚಿನಹಾಳ, ತಾಲೂಕಿನ ಅಧಿಕಾರಿಗಳು ಮತ್ತು ದಲಿತ ಮುಖಂಡರು ಹಾಜರಿದ್ದರು.