

ವಿಜಯವಾಣಿ ಸುದ್ದಿಜಾಲ ಉಡುಪಿ
ತಂತ್ರಜ್ಞಾನದ ಯುಗದಲ್ಲಿ ದಾಪುಗಾಲಿಟ್ಟು ಓಡುತ್ತಿರುವ ನಾವುಗಳೆಲ್ಲ ರೋಬಾಟ್ ಹಾಗೂ ಮೆಕ್ಯಾನಿಕಲ್ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬದುಕು ಕಳಾಹೀನವಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಮಗೆ ದೇಸೀಯ ವಿವಿಧ ಕಲೆಗಳು ಸ್ಫೂರ್ತಿಯಾಗುತ್ತವೆ. ಕಲೆ-ಕಲಾವಿದರು ಇದ್ದಲ್ಲಿ ಮಾತ್ರ ಎಲ್ಲರ ಬದುಕಿಗೂ ವಿವಿಧ ಬಣ್ಣ ಲಭಿಸುತ್ತವೆ. ಇಲ್ಲದಿದ್ದಲ್ಲಿ ಎಲ್ಲರ ಬದುಕು ಕಪ್ಪು-ಬಿಳುಪು ಎಂದು ಉಡುಪಿಯ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂಯೋಜಕ, ಕಾವಿ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಥುರಾದ ಸಾಂಝಿ ಕಲೆಯು ದೇಸೀಯ ಕಲಾ ಪ್ರಕಾರವಾಗಿದೆ. ಟ್ರೀ ಆಫ್ ಲೈಫ್, ಕೃಷ್ಣನ ಲೀಲೆಗಳು, ಬುದ್ಧ, ನಿಸರ್ಗದ ಚಿತ್ರಗಳಿಗೆ ಈ ಕಲೆ ಪ್ರಸಿದ್ಧವಾಗಿದೆ. ಇಂದಿಗೂ ಒಳಾಂಗಣ ವಿನ್ಯಾಸದಲ್ಲಿ ಮಹತ್ವದ ಸ್ಥಾನ ಉಳಿಸಿಕೊಂಡಿದೆ. ಜಿಐ ಟ್ಯಾಗ್ ಗಳಿಸಿರುವ ದೇಸೀಯ ಕಲಾಪ್ರಕಾರವೊಂದನ್ನು ಉಡುಪಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಲಾಪ್ರದರ್ಶನ ಏರ್ಪಡಿಸಲಾಗಿದೆ. ಜ. 26ರ ವರೆಗೆ ಮಧ್ಯಾಹ್ನ 3ರಿಂದ 7ರ ವರೆಗೆ ಕಲಾಸಕ್ತರ ವೀಕ್ಷಣೆ ತೆರೆದಿರಲಿದೆ ಎಂದರು.
ಫೌಂಡೇಷನ್ನ ನಿರ್ದೇಶಕ ಹಾವಂಜೆ ಮಂಜುನಾಥ ರಾವ್, ಕಲಾವಿದ ಪಿ.ಎನ್. ಆಚಾರ್ಯ, ವರ್ಷಾ ಎ.ಜೆ. ಉಪಸ್ಥಿತರಿದ್ದರು. ಅನೇಕರು ಸಾಂಝಿ ಕಲೆಯಲ್ಲಿ ಅರಳಿದ ವಿವಿಧ ಕಲಾಕೃತಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ದೇಶದ ಎಲ್ಲ ಕಲೆಗಳೂ ಸಹ ಅತ್ಯಂತ ಶ್ರೀಮಂತವಾಗಿದ್ದು, ಶತಶತಮಾನಗಳ ಹಿಂದಿನ ದೇವ-ಮಾನವರ ಹಾಗೂ ಪೃಕೃತಿಯ ನಡುವಿನ ಸಂಬಂಧ ತಿಳಿಸುವ ಮಹತ್ತರವಾದ ಕುರುಹು ಆಗಿದೆ. ಶಿಕ್ಷಣದ ಭಾಗವೇ ಆಗಿರುವ ಇಂತಹ ದೇಸೀ ಕಲೆಗಳನ್ನು, ಆ ಕಲೆಯನ್ನು ರಕ್ಷಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. | ಶ್ರೀಜಾ ಜಯಕುಮಾರ್. ಆರ್ಕಿಟೆಕ್ಟ್, ಉಡುಪಿ