ಕನ್ನಡ ಉಳಿವಿಗೆ ಶ್ರಮಿಸುತ್ತಿರುವ ಮಠಗಳು

13Athni1
Published on

ಅಥಣಿ: ಪಸ್ತುತ ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತಾತ್ಮಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸುಧಾರಣೆಯಾದರೆ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣವಾಗಲು ಸಾಧ್ಯ. ಗಡಿನಾಡಿನಲ್ಲಿ ಶರಣ ಸಂಸ್ಕೃತಿ ಪ್ರಸಾರದ ಜತೆಗೆ ಕನ್ನಡ ಉಳಿವಿಗೆ ಶ್ರಮಿಸುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದು ಸಾಣೆಹಳ್ಳಿಯ ತರಳಬಾಳು ಬ್ರಹ್ಮನಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಗಚ್ಚಿನಮಠದ ವಿದ್ಯಾಪೀಠದ ಆವರಣದಲ್ಲಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಕಸಾಪ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಡಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ, ಚನ್ನಬಸವೇಶ್ವರ ಗ್ರಂಥಮಾಲೆಯ ಅಮೃತ ಮಹೋತ್ಸವದದಲ್ಲಿ ಮಾತನಾಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನಮಠದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಮಕ್ಕಳಿಗೆ ನಿತ್ಯ ವಚನ ಕಲಿಸುವುದರಿಂದ ಮಾನಸಿಕ, ದೈಹಿಕ ಸದೃಢತೆ, ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶರಣರ ವಚನಸಾಹಿತ್ಯದ ಲವಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯ ಇಂದು ವಿಶ್ವಮಟ್ಟದಲ್ಲಿ ಶ್ರೀಮಂತ ಭಾಷೆಯಾಗಿದೆ. ಕನ್ನಡಿಗರು ಸ್ವಾಭಿಮಾನ ಹಾಗೂ ಅಭಿಮಾನದಿಂದ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಾಹಿತಿಗಳಾದ ಡಾ.ಬೈಲಮಂಗಲ ರಾಮೇಗೌಡ, ಡಾ.ವಿ.ಎಸ್.ಮಾಳಿ, ಶಿವಾನಂದ ಟವಳಿ, ಡಾ.ಕಲ್ಯಾಣರಾವ ಪಾಟೀಲ ಮಾತನಾಡಿದರು. ಅಥಣೀಶ ವಚನೋಧ್ಯಾನ ಗ್ರಂಥ ಬಿಡುಗಡೆಗೊಳಿಸಲಾಯಿತು. ಧಾರವಾಡದ ಡಾ.ಶಿವಾನಂದ ಟವಳಿ ಅವರಿಗೆ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಚಿವೆ ಲೀಲಾದೇವಿ ಪ್ರಸಾದ, ಪ್ರಕಾಶ ಕಂಬತ್ತಳ್ಳಿ, ಶಂಕರ ಹಲಗತ್ತಿ, ಕೆ.ಎಲ್.ರಾಜಶೇಖರ, ಪಾಲನೇತ್ರ, ಸ್ವಾನ್ಯ ಕೃಷ್ಣಮೂರ್ತಿ ಅವರಿಗೆ ಸಮಾಜ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಸಿದ್ಧ್ದಲಿಂಗ ಸ್ವಾಮೀಜಿ, ಬಿ.ಎಲ್.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net