

ಹೊಳೆನರಸೀಪುರ : ಗಣಿತ ಎಂಬುದು ಕಬ್ಬಿಣದ ಕಡಲೆ ಅಲ್ಲ ಎಂದು ಬಿಇಒ ಸೋಮಲಿಂಗೇಗೌಡ ತಿಳಿಸಿದರು.
ಪಟ್ಟಣದ ಪಾರ್ಕ್ ಹಿಂಭಾಗದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುರಸಭೆ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪುರಸಭೆ ಮಟ್ಟದ ಗಣಿತ ಮೆಟ್ರಿಕ್ ಮೇಳ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಗಣಿತದ ಭಯವನ್ನು ಹೋಗಲಾಡಿಸಬೇಕು. ಗಣಿತದ ಕಲಿಕೆಯನ್ನು ಸರಳೀಕರಣ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಗಣಿತ ಮಾಸಾಚರಣೆ ಅಂಗವಾಗಿ 25 ಚಟುವಟಿಕೆಗಳ ಒಳಗೊಂಡ ಪುಸ್ತಕ ರಚಿಸಿ, ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದ ಬಗೆಗಿನ ಆತಂಕ ಹೋಗಲಾಡಿಸಲು ಕ್ರಮ ವಹಿಸಲಾಗಿದೆ ಎಂದು ಸೋಮಲಿಂಗೇಗೌಡ ತಿಳಿಸಿದರು.
ತರಗತಿಗಳಲ್ಲಿ ಶಿಕ್ಷಕರು ನಡೆಸಿದ ವಿಶೇಷ ಬೋಧನೆ, ವಿದ್ಯಾರ್ಥಿಗಳ ಕಲಿಕೆ ಮೌಲ್ಯಮಾಪನ ಮಾಡಲಾಗುತ್ತದೆ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಬಿಆರ್‌ಸಿ ಭಾಗ್ಯಮ್ಮ, ಬಿಆರ್‌ಪಿ ವಿಶ್ವನಾಥ್, ಮುಖ್ಯ ಶಿಕ್ಷಕರಾದ ಲೋಕೇಶ್, ಶಿಕ್ಷಕರಾದ ಕೃಷ್ಣಯ್ಯ, ದೌಲತ್ ರಾವ್, ಚಂದ್ರಶೇಖರ್, ಸತ್ಯವತಿ, ಮಂಜುನಾಥ್, ನಟರಾಜಪ್ಪ, ಪ್ರಭಾಮಣಿ, ಪಂಕಜಾ, ದೇವರಾಜು ಇತರರು ಇದ್ದರು.