

ಮಳವಳ್ಳಿ: ಐತಿಹಾಸಿಕ ಸಿಡಿಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದಲ್ಲಿ ಸುಲ್ತಾನ್ ರಸ್ತೆ ಬದಿಯಲ್ಲಿರುವ ಪಟ್ಟಲದಮ್ಮ ದೇವಸ್ಥಾನದಲ್ಲಿ ಚಿಕ್ಕಮ್ಮ-ದೊಡ್ಡಮ್ಮ ತಾಯಿ ವಿಗ್ರಹಗಳಿಗೆ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಅರ್ಚಕರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪಟ್ಟಲದಮ್ಮನಿಗೆ ಭಕ್ತಿ ಸಮರ್ಪಿಸಿದರು.
ದೇವಾಲಯವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು. ಹೊರ ಊರುಗಳಿಂದ ಸಿಡಿ ವೀಕ್ಷಣೆ ಮಾಡಲು ಸಹಸ್ರಾರು ಜನರು ಆಗಮಿಸಿದ್ದರು. ಶನಿವಾರ ದೇವಸ್ಥಾನ ಆವರಣದಲ್ಲಿ ನಡೆಯುವ ಕೊಂಡೋತ್ಸವಕ್ಕೆ ತಮ್ಮಡಹಳ್ಳಿ ನಾಡಗೌಡರ ನಿಂಗೇಗೌಡರ ಕುಟುಂಬದವರು ಮಧ್ಯಾಹ್ನದ ನಂತರ ಸೌದೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೂರಾರು ಎತ್ತಿನ ಗಾಡಿಗಳು ಸೌದೆ ಕಟ್ಟಿಕೊಂಡು ಮೆರವಣಿಗೆ ಮೂಲಕ ಪಟ್ಟಲದಮ್ಮನ ದೇವಸ್ಥಾನಕ್ಕೆ ಆಗಮಿಸಿದವು.
ಪಟ್ಟಣ ಸೇರಿದಂತೆ ತಾಲೂಕಿನ ತಮ್ಮಡಹಳ್ಳಿ, ಬಸವನಪುರ, ಬುಗತಗಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬದವರೊಡನೆ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದರು.