ಸರ್ಕಾರದ ಹೊರೆ ತಗ್ಗಿಸಿವೆ ಮಠಮಾನ್ಯಗಳು: ಬಿ.ಎಸ್.ಯಡಿಯೂರಪ್ಪ

mysore
Published on

ಮೈಸೂರು: ಶಿಕ್ಷಣ, ಆರೋಗ್ಯ, ಅನ್ನದಾಸೋಹದ ಮೂಲಕ ಮಠಮಾನ್ಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ರಾಜ್ಯ ಸರ್ಕಾರದ ಹೊರೆಯನ್ನು ಕಡಿಮೆ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.


ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿವರ ಜಾತ್ರಾ ಮಹೋತ್ಸವದ ಹಿನ್ನೆಲೆ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಮಠಮಾನ್ಯಗಳ ಕೆಲಸ-ಕಾರ್ಯವನ್ನು ಪ್ರೋತ್ಸಾಹಿಸಲು ನಾನು ಸಿಎಂ ಆಗಿದ್ದಾಗ ಹೆಚ್ಚಿನ ಅನುದಾನ ನೀಡಿದ್ದೆ. ಮುಸ್ಲಿಂ, ಕ್ರೈಸ್ತ, ಹಿಂದು ಎಂಬ ಭೇದಭಾವ ಮಾಡಿರಲಿಲ್ಲ. ಎಲ್ಲರಿಗೂ ಅನ್ವಯವಾಗುವ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದೆ. ಈಗಿನ ಸರ್ಕಾರ ಸಹ ಎಲ್ಲರಿಗೂ ಸಮಾನವಾಗಿ ಅನುದಾನವನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸುತ್ತೂರು ಜಾತ್ರೆಯ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಾತಿ ಭೇದಭಾವವಿಲ್ಲದೆ ಎಲ್ಲರೂ ಸೇರಿ ಇದನ್ನು ಆಚರಣೆ ಮಾಡುತ್ತಾರೆ. ಎಲ್ಲ ಸಮುದಾಯದವರೂ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಗ್ರಾಮೀಣ ಸೊಗಡಿನ ಕ್ರೀಡೆಗಳಿಗೂ ಪೋತ್ಸಾಹ ನೀಡಲಾಗಿದೆ. ಗ್ರಾಮೀಣ ಆಟೋಟಗಳು ಸಾಂಸ್ಕೃತಿಕ ರಾಯಭಾರಿ ಎಂದು ಬಣ್ಣಿಸಿದರು.


ಹಿಂದು ಧರ್ಮ ಜಗತ್ತಿಗೆ ಆಶಾಕಿರಣವಾಗಿದೆ ಎಂದು ಬಣ್ಣಿಸಿದ ಅವರು, ಭಾರತ ಅಧ್ಯಾತ್ಮಿಕ ತಾಣವಾಗಿ ರೂಪುಗೊಂಡಿದೆ. ಈ ಹಿಂದೆ ಭಾರತವನ್ನು ಹಾವಾಡಿಗರ ದೇಶ ಎಂದು ವ್ಯಂಗ್ಯ ಮಾಡಲಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಪರಕೀಯ ದಾಳಿಯಿಂದಲೂ ಭಾರತ ಎದೆಗುಂದಲಿಲ್ಲ. ಇದಕ್ಕೆ ಕಾರಣ ಸನಾತನ ಧರ್ಮ. ಹಳ್ಳಿ ಮತ್ತು ಜನರಲ್ಲಿ ಆಧ್ಯಾತ್ಮಿಕತೆ ಇದೆ. ಪರಕೀಯ ದಾಳಿಯಿಂದ ದೇಶವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಮಠಗಳು ಬೆಳೆಯುವುದು ಕಟ್ಟಡಗಳಿಂದಲ್ಲ, ಸಾಮಾಜಿಕ ಕಾರ್ಯಗಳಿಂದ

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮಠಗಳು ಬೆಳೆಯುವುದು ಕಟ್ಟಡಗಳಿಂದಲ್ಲ, ಅವುಗಳು ಮಾಡುವ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಂದ. ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇವುಗಳು ಶಕ್ತಿ ತುಂಬಬೇಕು. ಸುತ್ತೂರು ಮಠ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆದರೆ, ಸಾಗಬೇಕಿರುವ ದಾರಿ ಇನ್ನೂ ಬಹಳಷ್ಟು ದೂರ ಇದೆ ಎಂದರು.


ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ತುಂಬಿರುವುದನ್ನು ಯಾರೂ ಮರೆಯುವಂತಿಲ್ಲ. ಇವುಗಳು ಇಲ್ಲವಾಗಿದ್ದರೆ ಹಳ್ಳಿಗಳು ಉದ್ಧಾರವಾಗುತ್ತಿರಲಿಲ್ಲ. ಶೋಷಿತರು, ದುಡಿಯುವ ವರ್ಗದವರು ಈಗಲೂ ಕೀಳಾಗಿಯೇ ಬದುಕಬೇಕಿತ್ತು. ಈ ವರ್ಗದವರಿಗೆ ಶಿಕ್ಷಣ, ಊಟ ನೀಡಿದ್ದರಿಂದ ಪರಿಸ್ಥಿತಿ ಸುಧಾರಣೆ ಆಗಿದೆ. ಮಠಗಳ ಶಿಕ್ಷಣ ಕ್ರಾಂತಿಯಿಂದ ಶೋಷಿತರು, ಹಿಂದುಳಿದ ವರ್ಗದವರಿಗೆ ಸಾಮಾಜಿಕ ಸ್ಥಾನಮಾನ, ಗೌರವ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮಾಜಿ ಸಚಿವ ಮುರುಗೇಶ್ ಆರ್.ನಿರಾಣಿ ಮಾತನಾಡಿ, ಹತ್ತಾರು ಊರುಗಳನ್ನು ಸುತ್ತುವುದಕ್ಕಿಂತ ಸುತ್ತೂರು ಜಾತ್ರೆ ನೋಡಿದರೆ ಸಾಕು ಎಂಬ ಮಾತು ಉತ್ತರ ಕರ್ನಾಟಕದಲ್ಲಿ ಜನಜನಿತವಾಗಿದೆ. 2008ರಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿಸಿ ನಷ್ಟಕ್ಕೆ ಒಳಗಾಗಿದ್ದ ಗ್ರಾಮವೊಂದನ್ನು ಸ್ಥಳಾಂತರ ಮಾಡಿ ಆ ಗ್ರಾಮಸ್ಥರಿಗೆ ಸುತ್ತೂರು ಮಠದಿಂದ ಮನೆ ಕಟ್ಟಿಸಿಕೊಡಲಾಯಿತು. ಈ ಭಾಗದ ಜನರು ಈಗಲೂ ಸುತ್ತೂರು ಮಠವನ್ನು ಸ್ಮರಿಸುತ್ತಾರೆ ಎಂದು ಹೇಳಿದರು.

ಮನುಷ್ಯರಲ್ಲಿ ಪರೋಪಕಾರ ಗುಣ ಕಡಿಮೆ.


ಶ್ರವಣಬೆಳಗೊಳ ಜೈನ ಮಠದ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯರಲ್ಲಿ ಪರೋಪಕಾರ ಗುಣ ಕಡಿಮೆ. ಪ್ರಕೃತಿಯಿಂದ ಇದನ್ನು ನೋಡಿ ಕಲಿಯಬೇಕಿದೆ. ಗಿಡ, ಮರ, ಬೆಟ್ಟಗುಡ್ಡಗಳಿಗೆ ಮನುಷ್ಯರು ತೊಂದರೆ ಕೊಡುತ್ತಾರೆ. ಆದರೆ ಅವುಗಳು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಬದಲಿಗೆ ಪರೋಪಕಾರ ಮಾಡುತ್ತೇವೆ. ಈ ಗುಣವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬೇರೆಯವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಕೇಡು ಬಯಸಬಾರದು ಎಂದು ತಿಳಿಸಿದರು.


ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೀನುಗಾರಿಕೆ ಸಚಿವ ಮಕಾಳ ವೈದ್ಯ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಮಂಜು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಮಾಜಿ ಶಾಸಕರಾದ ಎಲ್.ನಾಗೇಂದ್ರ, ನಿರಂಜನಕುಮಾರ್, ಮಾಜಿ ಎಂಎಲ್‌ಸಿಗಳಾದ ಲಕ್ಷ್ಮೀನಾರಾಯಣ, ತೋಂಟದಾರ್ಯ, ದೀಪಕ್ ಸಲೂಜ ಇತರರು ಇದ್ದರು.

ಉತ್ತರ, ದಕ್ಷಿಣ ಭಾರತ ಒಡಕಿನ ಮಾತು


ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಮಾತನಾಡಿ, ಉತ್ತರ ಭಾರತ, ದಕ್ಷಿಣ ಭಾರತ ಎಂಬ ಒಡಕಿನ ಮಾತು ಈಗ ಶುರುವಾಗಿದೆ. ಇದು ಸರಿಯಲ್ಲ. ಆಧ್ಯಾತ್ಮಿಕತೆ, ಧಾರ್ಮಿಕತೆಯಿಂದ ದೇಶದ ಒಗ್ಗಟ್ಟನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಹೇಳಿದರು.


ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಅಖಂಡ ಭಾರತ ನಮ್ಮದು. ಇಲ್ಲಿ ದಕ್ಷಿಣ ಭಾರತ, ಉತ್ತರ ಭಾರತ ಎಂಬ ಪ್ರಶ್ನೆ ಬರುವುದಿಲ್ಲ. ಉತ್ತರ ಭಾಗದಲ್ಲಿರುವ ಕೇದಾರನಾಥ, ಕಾಶಿ ದೇಗುಲಕ್ಕೆ ದಕ್ಷಿಣ ಭಾಗದವರು ಹೋಗುತ್ತಾರೆ. ಅಂತೆಯೇ, ದಕ್ಷಿಣದಲ್ಲಿ ರಾಮೇಶ್ವರ ದೇವಸ್ಥಾನಕ್ಕೆ ಉತ್ತರ ಭಾರತೀಯರು ಬರುತ್ತಾರೆ. ಈ ರೀತಿಯ ಧಾರ್ಮಿಕತೆ, ಆಧ್ಯಾತ್ಮಿಕತೆಯು ಭಾರತವನ್ನು ಒಂದಾಗಿಸುತ್ತದೆ ಎಂದರು.


ಸಮಾಜದಲ್ಲಿ ಆಧ್ಯಾತ್ಮಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಕೆಲಸ, ಸೇವಾ ಕಾಯಕ ಮಾಡಲು ಇದುವೇ ಪ್ರೇರಣೆ ಎಂದರು.


ಆಧ್ಯಾತ್ಮಿಕತೆ ಮತ್ತು ಭಕ್ತಿ ಚಳವಳಿಗೆ ಬೀಜ ಬಿತ್ತಿದವರು ಬಸವಣ್ಣನವರು. 12ನೇ ಶತಮಾನದಲ್ಲೇ ಜನಕಲ್ಯಾಣಕ್ಕಾಗಿ ಸಮಾಜ ಪರಿವರ್ತಕರಾಗಿ ಕಾಯಕ ಮಾಡಿದರು. ಈಗ ಕಾಣುವ ಸಂಸತ್ ಆ ಕಾಲದಲ್ಲೇ ಅನುಭವ ಮಂಟಪದ ಪರಿಕಲ್ಪನೆ.

ಈ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆ ಚರಿತ್ರೆಯಲ್ಲಿ ಎಲ್ಲೂ ಕಾಣಲು ಸಿಗುವುದಿಲ್ಲ. ಸ್ವಾತಂತ್ರೃ ಹೋರಾಟಗಾರರಿಗೂ ಆಧ್ಯಾತ್ಮಕತೆ ಸ್ಫೂರ್ತಿ ಸೆಲೆಯಾಗಿತ್ತು. ಗಾಂಧೀಜಿಯಿಂದ ಹಿಡಿದು ಅನೇಕ ಚಳವಳಿಗಾರರಿಗೆ ಇದು ಚೈತನ್ಯ ತುಂಬಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net