ಮತ್ತಿಹಳ್ಳಿ ಗ್ರಾಪಂ ನೌಕರನ ವಜಾ ಏಕಿಲ್ಲ ! : ಕಾರಣ ಕೇಳಿ ಅಧಿಕಾರಿಗಳಿಗೆ ಜಿಪಂ ಸಿಇಒ ನೋಟಿಸ್ ; ತಾಯಿ ಹೆಸರಿನಲ್ಲಿ 1.12 ಲಕ್ಷ ರೂ. ಲಪಟಾಯಿಸಿದ್ದ ಡೇಟಾ ಎಂಟ್ರಿ ಆಪರೇಟರ್

1
Published on

ತಿಪಟೂರು: ಕರ್ತವ್ಯಲೋಪ ಎಸಗಿರುವುದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದ್ದರೂ ನೌಕರನನ್ನು ಮತ್ತಿಹಳ್ಳಿ ಗ್ರಾಪಂ ಅಧಿಕಾರಿಗಳು ವಜಾಗೊಳಿಸದ ಹಿನ್ನೆಲೆಯಲ್ಲಿ ಕಾರಣ ಕೇಳಿ ಜಿಪಂ ಸಿಇಒ ನೋಟಿಸ್ ಜಾರಿ ಮಾಡಿದ್ದಾರೆ.

ಗ್ರಾಪಂನಲ್ಲಿ 2016-17ನೇ ಸಾಲಿನಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ಕಾಂತರಾಜು ಅವರ ತಾಯಿ ಲಕ್ಷ್ಮೀದೇವಮ್ಮ (ಸಂ.561376, 2016-17) ಅಂಬೇಡ್ಕರ್ ವಸತಿ ಯೋಜನೆಯ ಲಾನುಭವಿ ಆಗಿದ್ದರು. ಆದರೆ, ಬೇರೊಬ್ಬ ಲಾನುಭವಿಯ ನಿರ್ಮಾಣ ಹಂತದ ಮನೆ ತೋರಿಸಿ, ಪಬ್ಲಿಕ್ ಆ್ಯಪ್‌ನಲ್ಲಿ ತಳಪಾಯ ಹಂತದ, ಬಳಿಕ ಇಂದಿರಾ ಆ್ಯಪ್‌ನಲ್ಲಿ ಗೋಡೆ ಮತ್ತು ಛಾವಣಿ ಹಂತದ ಜಿಪಿಎಸ್ ಮಾಡಿ, ಎರಡೂ ಹಂತಗಳಿಂದ ಒಟ್ಟು 1.12 ಲಕ್ಷ ರೂ. ಲಪಟಾಯಿಸಿದ್ದರು. ಈ ಬಗ್ಗೆ ವಿಜಯವಾಣಿ ಪತ್ರಿಕೆ 2021ರ ಜನವರಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಬಳಿಕ ಎಚ್ಚೆತ್ತ ತಾಪಂ ಇಒ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕಾಂತರಾಜು ಅಧಿಕಾರ ದುರ್ಬಳಕೆ ಮಾಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 113 (3)ರ ಅಡಿ, ಕಾಂತರಾಜು ಅವರನ್ನು ವಜಾಗೊಳಿಸಲು 2021ರ ನವೆಂಬರ್ 23ರಂದು ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯ ಮತ್ತಿಹಳ್ಳಿ ಗ್ರಾಪಂಗೆ ಆದೇಶಿಸಿತ್ತು. ಆದರೆ, ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚಿನ್ನಸ್ವಾಮಿ ಸೇರಿ ಒಟ್ಟು 16 ಸದಸ್ಯರು ಕಾಂತರಾಜು ಅವರನ್ನು ವಜಾಗೊಳಿಸದಂತೆ ನಿರ್ಣಯ ಕೈಗೊಂಡಿದ್ದರು. ಇದರ ಬಗ್ಗೆ ಜಿಪಂ ಸಿಇಒಗೆ ಇಒ ಮಾಹಿತಿ ನೀಡಿದ್ದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು ಮಾ.2ರಂದು ಗ್ರಾಪಂಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, 3 ದಿನಗಳ ಒಳಗಾಗಿ ಸ್ಪಷ್ಟನೆ ಕೊಡುವಂತೆ ಸೂಚಿಸಿದ್ದಾರೆ.

ಅಪರಾಧಿ ಎನ್ನಲಾದ ಕಾಂತರಾಜು ಡೇಟಾ ಎಂಟ್ರಿ ಆಪರೇಟರ್ ಆಗಿದ್ದಾರೆ. ಜಿಪಿಎಸ್ ಡಾಂಗಲ್ ಪಿಡಿಒ ಬಳಿ ಇರುತ್ತದೆ. ನಮ್ಮ ಅಧಿಕಾರಾವಧಿಯಲ್ಲಿ ಯಾವುದೇ ತಪ್ಪು ನಡೆದಿಲ್ಲ. ಕಾಂತರಾಜು ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತಾಪಂ ಇಒ ಅಥವಾ ಜಿಪಂ ಸಿಇಒ ನಿರ್ಧರಿಸಲಿ. ಈ ಬಗ್ಗೆ ನಾವು ನಿರ್ಣಯ ಮಂಡಿಸಲ್ಲ. ಎ.ಎಸ್.ಚಿನ್ನಸ್ವಾಮಿ, ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net